ಪೆಟ್ರೋಲ್ ಬಂಕ್ ನೌಕರರನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ 12.76ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮಂಡ್ಯದ ಮದ್ದೂರು ತಾಲೂಕು ನಿಡಘಟ್ಟ ಗೇಟ್ ಬಳಿ ಸೋಮವಾರ ನಡೆದಿದೆ.
ಮದ್ದೂರು ಶಿವಪುರ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗೆ ಜಮಾ ಮಾಡಲು ದ್ವಿಚಕ್ರ ವಾಹನದಲ್ಲಿ ಗುರುಪ್ರಸಾದ್ ಮತ್ತು ಶಿವಕುಮಾರ್ ಅವರು ಹೊರಟ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸುಮಾರು 12.76ಲಕ್ಷದಷ್ಟು ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಲ್ಲೆಗೀಡಾದ ಸಿಬ್ಬಂದಿಯು ಪ್ರಜ್ಞಾಶೂನ್ಯರಾಗಿದ್ದರಿಂದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಪ್ರಜ್ಞೆ ಮರಳಿದ ನಂತರ ಪೆಟ್ರೋಲ್ ಬಂಕ್ ಸಿಬ್ಬಂದಿಯ ಹೇಳಿಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಾಡಹಗಲೇ ನಡೆದಿರುವ ದರೋಡೆ ಪ್ರಕರಣದಿಂದ ಬೆಚ್ಚಿಬಿದ್ದಿರುವ ಮದ್ದೂರು ಜನತೆ, ಇದು ಪರಿಚಿತರಿಂದಲೇ ನಡೆದಿರುವ ಯೋಜಿತ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. |