ಬಾಂಬ್ ಪೂರೈಕೆ ಕುಖ್ಯಾತಿಗೆ ಒಳಗಾಗಿರುವ ಕರ್ನಾಟಕ ಇದೀಗ, ಸ್ಫೋಟ ಸಂಬಂಧ ಹೊಣೆ ಹೊತ್ತು ಮಾಧ್ಯಮಗಳಿಗೆ ಇ-ಮೇಲ್ ಸಂದೇಶ ರವಾನಿಸುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಮಹಮ್ಮದ್ ಮನ್ಸೂರ್ ಅಸ್ಗರ್ ಪೀರ್‌ಬಾಯ್ ಭಟ್ಕಳದಲ್ಲಿ ತರಬೇತಿ ಪಡೆದಿದ್ದ ಎಂಬ ವಿಷಯ ಇದೀಗ ಬಹಿರಂಗವಾಗಿದೆ.
ಈ ಕುರಿತು ತೀವ್ರ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು ಮಹತ್ವದ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಸ್ಫೋಟದ ಸಂಬಂಧ ಬಂಧಿತನಾಗಿರುವ ಉಗ್ರ ಆಸಿಫ್ ಬಷೀರ್ ವಿಚಾರಣೆ ವೇಳೆ ಮನ್ಸೂರ್ ಭಟ್ಕಳದಲ್ಲಿ ತರಬೇತಿ ಪಡೆದಿರುವ ಬಗ್ಗೆ ತಿಳಿಸಿದ್ದಾನೆ.
2004ರಲ್ಲಿ ಮುಂಬೈನ ಅರೆಬಿಕ್ ಶಾಲೆಯೊಂದಕ್ಕೆ ತೆರಳುತ್ತಿದ್ದ ಮನ್ಸೂರ್ ಉಗ್ರರ ಗಮನ ಸೆಳೆದಿದ್ದ. ಈತ ತಮ್ಮ ಕೃತ್ಯಗಳಿಗೆ ಸಹಕಾರಿಯಾಗಬಲ್ಲ ಎಂದು ಗುರುತಿಸಿದ್ದ ಉಗ್ರರು ಆತನ ಮೇಲೆ ಹದ್ದುಗಾವಲಿಟ್ಟಿದ್ದು, ಆತನನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದರು.
ನಂತರ ದುಷ್ಕೃತ್ಯ ನಡೆಸಲು ಹೇಗೆ ಮಾನಸಿಕವಾಗಿ ಸಿದ್ದವಾಗಬೇಕು ಎಂಬುದನ್ನು ಮನ್ಸೂರ್‌ಗೆ ಮನನ ಮಾಡಿಕೊಟ್ಟ ಇಂಡಿಯನ್ ಮುಜಾಹಿದೀನ್ ಉಗ್ರರು ಈತನನ್ನು ಕೆಲವೊಂದು ತರಬೇತಿ ಪಡೆಯಲು 2006ರಲ್ಲಿ ಭಟ್ಕಳಕ್ಕೆ ಕಳುಹಿಸಿಕೊಟ್ಟಿದ್ದರು.
ಈ ರೀತಿ ತರಬೇತಿ ಪಡೆದಿದ್ದ ಕೆಲವು ಯುವಕರು ನಂತರ ಇದು ತಪ್ಪೆಂದು ಕಂಡುಕೊಂಡು ದುಷ್ಕೃತ್ಯಗಳಿಂದ ಹಿಂದೆ ಸರಿದಿದ್ದರು. ಆದರೆ ಅಸ್ಗರ್ ಮಾತ್ರ ಅಲ್ಲೇ ಉಳಿದುಕೊಂಡ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಉಗ್ರರು ಸ್ಫೋಟಕ ವಸ್ತುಗಳನ್ನು ಕರ್ನಾಟಕದಿಂದ ಪುಣೆಗೆ ನಂತರ ಸೂರತ್‌ಗೆ ಕೊಂಡೊಯ್ದಿದ್ದರು. ಸ್ಫೋಟಕ ವಸ್ತುಗಳನ್ನು ಜೋಡಿಸಲು ಮಹಮ್ಮದ್ ಆರಿಫ್ ಶೇಖ್ ಎಂಬಾತನನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲಾಗಿತ್ತು.
ಯೋಜನೆಯ ಪ್ರಕಾರ ಸೆ.19ರಂದು ಅಹಮದಾಬಾದ್‌ನಲ್ಲಿ ಸ್ಫೋಟ ನಡೆಸಬೇಕಿತ್ತು. ಆದರೆ ಕಾರಣಾಂತರದಿಂದ ಅದನ್ನು ಸೆ.26ಕ್ಕೆ ಮುಂದೂಡಲಾಯಿತು ಎಂದು ಉಗ್ರರು ವಿಷಯ ಬಹಿರಂಗಪಡಿಸಿದ್ದಾರೆ. |