ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಭಾವೈಕ್ಯ ಮಂಡಳಿ ಸಭೆ ಯಾವುದೇ ಪೂರ್ವಸಿದ್ದತೆ ಇಲ್ಲದ, ಕಾಟಾಚಾರದ, ರಾಜಕೀಯ ಉದ್ದೇಶದ ವ್ಯರ್ಥ ಕಸರತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ಸ್ಪಷ್ಟವಾದ ಕಾರ್ಯಸೂಚಿಯೇ ಇಲ್ಲದೆ ಸಭೆ ಕರೆಯಲಾಗಿದೆ. ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಯಾದ ಭಯೋತ್ಪಾದನೆಯ ಹೆಸರೆತ್ತಲು ಹಿಂಜರಿಯುತ್ತಿರುವ ಸರ್ಕಾರ ಅದರ ಬದಲಿಗೆ ಉಗ್ರಗಾಮಿ ಚಟುವಟಿಕೆಯನ್ನು ಪ್ರಸ್ತಾಪಿಸಿದೆ.
ವಿರೋಧಪಕ್ಷಗಳ ಮುಖ್ಯಮಂತ್ರಿಗಳಿಗೆ ಅಭಿಪ್ರಾಯ ಮಂಡನೆಗೆ ಹೆಚ್ಚಿನ ಅವಕಾಶವೇ ನೀಡಿಲ್ಲ ಎಂದು ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇವಲ ಅಲ್ಪಸಂಖ್ಯಾತರನ್ನು ಓಲೈಸಲು ಈ ಸಭೆ ನಡೆಸಲಾಗಿದೆ. ಭಾವೈಕ್ಯ ಸ್ಥಾಪನೆ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದಿದ್ದರೆ ತಾನು ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ನೀಡಬಹುದಿತ್ತು ಎಂದು ಅವರು ಹೇಳಿದರು.
ಬಲಾತ್ಕಾರದ ಮತಾಂತರ ನಿಷೇಧ ಕಾಯಿದೆಯ ಸಲಹೆಯನ್ನು ಸಮರ್ಥಿಸಿಕೊಂಡ ಗೃಹಸಚಿವ ಡಾ.ವಿ.ಎಸ್.ಆಚಾರ್ಯ, ಬಲಾತ್ಕಾರದ ಮತಾಂತರದ ಬಗ್ಗೆ ನಿರ್ದಿಷ್ಟವಾಗಿ ಯಾರೂ ಪೊಲೀಸರಿಗೆ ದೂರು ನೀಡಿಲ್ಲವಾದರೂ ಅಂತಹ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಾಯಿದೆಯೊಂದರ ಅಗತ್ಯ ಇದೆ ಎಂದರು. |