ಜಿಲ್ಲೆಯ ಹಿಂದೂ -ಮುಸಲ್ಮಾನರ ಭಾವೈಕ್ಯ ಕೇಂದ್ರ ಬಾಬುಬುಡನ್ ಗಿರಿ-ದತ್ತಪೀಠದಲ್ಲಿ ಹಿಂದೂ ಪರ ಸಂಘಟನೆಗಳು ಹಮ್ಮಿಕೊಂಡಿರುವ ದತ್ತಮಾಲೆ ಅಭಿಯಾನಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ದತ್ತಮಾಲೆ ಧಾರಣೆಗೆ ಸೋಮವಾರ ಚಾಲನೆ ನೀಡಲಾಯಿತು.
ಅ.19ರಂದು ದತ್ತಮಾಲೆ ಅಭಿಯಾನ ನಡೆಯಲಿದೆ. ಈ ಅಂಗವಾಗಿ ಆಂಜನೇಯ ದೇವಾಸ್ಥಾನದಲ್ಲಿ ಬಿಜೆಪಿಯ ನಗರ ಅಧ್ಯಕ್ಷ ರಾಜಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ದತ್ತಮಾಲೆ ಧಾರಣೆಯಲ್ಲಿ ಶಾಸಕ ಸಿ.ಟಿ. ರವಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಟಿ. ರವಿ, ಸಂಘ ಪರಿವಾರ ಹಾಗೂ ಬಿಜೆಪಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶಾಂತ ರೀತಿಯಲ್ಲಿ ಅಭಿಯಾನ ನಡೆಯುತ್ತಿದ್ದು, ರಕ್ಷಣಾ ದೃಷ್ಟಿಯಿಂದ ಪಾದುಕೆಗಳನ್ನು ಕೊಂಡೊಯ್ಯಲು ಬಿಡದ ಜಿಲ್ಲಾಧಿಕಾರಿ ಕ್ರಮ ಸರಿಯೆಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ನಡುವೆ ಸಂಘ ಪರಿವಾರ ಅ. 19 ರಂದು ನಡೆಸಲು ಉದ್ದೇಶಿಸಿರುವ ದತ್ತಮಾಲೆ ಅಭಿಯಾನ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೊಮ್ಮೆ ಶಾಂತಿ ಕೆದಡುವ, ಕೀಟಲೆ ಮಾಡುವ ಯತ್ನ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಶಾಸಕ ರವಿ ಸ್ವಾಗತ: ದತ್ತಪೀಠದಲ್ಲಿನ ಗುಹೆ ಕುಸಿದ ಹಿನ್ನೆಲೆಯಲ್ಲಿ ದತ್ತಪಾದುಕೆಗಳ ದರ್ಶನಕ್ಕೆ ಅವಕಾಶ ನೀಡದೆ ದತ್ತಮೂರ್ತಿಯನ್ನು ಗಿರಿಯಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲು ಅನುಮತಿ ನೀಡಿರುವ ಜಿಲ್ಲಾಡಳಿತದ ನಿರ್ಧಾರವನ್ನು ಸ್ವಾಗತಿಸುವುದಾಗಿ ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆದ ದತ್ತಮಾಲಾ ಧಾರಣ ವಿಧಿಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು ರಕ್ಷಣೆ ಮತ್ತು ಪಾವಿತ್ರ್ಯತೆಯ ಸಕಾರಣವನ್ನು ಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿಯೇ ಜಿಲ್ಲಾಧಿಕಾರಿಗಳು ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಹೇಳಿದರು. |