ಮೀನುಗಾರಿಕಾ ಸಚಿವ ಆನಂದ್ ಆಸ್ನೋಟಿಕರ್ ಸುಳ್ಳು ಪ್ರಮಾಣ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಸಾವಂತ್ ಅವರು ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆನಂದ್ ಆಸ್ನೋಟಿಕರ್ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಾಲೂಕಿನ ಮುಡಗೇರಿಯಲ್ಲಿನ 7 ಎಕರೆ ಜಮೀನಿನ ಕುರಿತು ಮರೆ ಮಾಚಲಾಗಿದೆ ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಚುನಾವಣಾಧಿಕಾಗಿಯಾಗಿದ್ದ ಉಪ ವಿಭಾಗಾಧಿಕಾರಿ ವಿಜಯ್ ಮಹಾಂತೇಶ್ ಅವರು, ಆಸ್ನೋಟಿಕರ್ ಪ್ರಮಾಣ ಪತ್ರ ಅಪೂರ್ಣದಿಂದ ಕೂಡಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದರು.
ಅಲ್ಲದೆ, ಈ ಮೊದಲು ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ ಸಿಆರ್ ಪಿಸಿ ಸೆಕ್ಷನ್ 195ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಪ್ರಕರಣ ಸಾಬೀತಾದರೆ ಆನಂದ್ ಆಸ್ನೋಟಿಕರ್ ಅವರಿಗೆ ಜೈಲು ಶಿಕ್ಷೆಯ ಜೊತೆಗೆ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ. |