ಸಿದ್ದಗಂಗಾ ಮಠದ ಡಾ.ಶಿವಕುಮಾರ್ ಸ್ವಾಮೀಜಿಯವರನ್ನು ಅವಹೇಳನ ಮಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಲ್ಲಿನ ಎಸಿಎಂಎಂ ನ್ಯಾಯಾಲಯ ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸಮನ್ಸ್ ಜಾರಿ ಮಾಡಲು ಆದೇಶಿಸಿದೆ.
2007ರ ನವೆಂಬರ್ 19ರಂದು ನಡೆದ ಬಹಿರಂಗ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರು, ಶತಾಯುಷಿ ಸಿದ್ದಗಂಗಾಶ್ರೀಗಳ ವಿರುದ್ಧ ಅವಹೇಳನಕಾರಿ ಮಾತನ್ನಾಡಿರುವ ಹಿನ್ನೆಲೆಯಲ್ಲಿ 8ನೇ ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿಗೆ ಆದೇಶಿಸಿದೆ.
ಅಲ್ಲದೇ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ. ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಕೀಲ ಅಮೃತೇಶ್ ಅವರು ಅರ್ಜಿ ಸಲ್ಲಿಸಿದ್ದರು.
ಇತ್ತೀಚೆಗಷ್ಟೇ ಕುಮಾರಸ್ವಾಮಿಯವರು, ಸಿದ್ದಗಂಗಾಶ್ರೀಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಸಂದರ್ಭದಲ್ಲಿ ತೀವ್ರ ಟೀಕೆ ಒಳಗಾಗಿದ್ದರು. ಇದೀಗ ನ್ಯಾಯಾಲಯ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಆದೇಶ ನೀಡಿದೆ. |