ಸತ್ಯ ಕಂಪ್ಯೂಟರ್ಸ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸೇರಿದ್ದ ಅಭಯ್ ಪ್ರತಾಪ್ ಸಿಂಗ್ (25ವ )ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಇತ್ತೀಚೆಗಷ್ಟೇ ನಗರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದ.
ಜಾರ್ಖಂಡ್ ರಾಜ್ಯದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪಂಚನಾನ್ ಸಿಂಗ್ ಅವರ ಪುತ್ರರಾಗಿರುವ ಪ್ರತಾಪ್ ಸಿಂಗ್ ಮೃತ ದುರ್ದೈವಿಯಾಗಿದ್ದಾರೆ. ಈತ ಪರಪ್ಪನ ಅಗ್ರಹಾರದ (ಪೇಯಿಂಗ್ ಗೆಸ್ಟ್) ಮನೆಯೊಂದರಲ್ಲಿ ವಾಸಿಸುತ್ತಿದ್ದ.
ಅಲ್ಲದೇ ಆತನೊಂದಿಗೆ ನಾಲ್ವರು ಜತೆಗಿದ್ದರು. ಇತರ ಮೂವರು ಕಚೇರಿಗೆ ಹೋಗಿದ್ದಾಗ, ಪ್ರತಾಪ್ ಕೋಣೆಯೊಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಕೋಣೆ ಬಾಗಿಲು ತುಂಬಾ ಹೊತ್ತು ಹೊತ್ತು ಲಾಕ್ ಆಗಿದ್ದರಿಂದ ಇತರ ಮೂವರು ಕಚೇರಿಯಿಂದ ವಾಪಸು ಬಂದು, ಬಾಗಿಲು ತೆರೆದಾಗ ಆತ ನೇಣು ಬಿಗಿದುಕೊಂಡಿರುವ ವಿಷಯ ತಿಳಿದು ಬಂದಿತ್ತು.
ನಂತರ ಈ ವಿಷಯವನ್ನು ಮನೆ ಮಾಲೀಕರ ಮೂಲಕ ಪೊಲೀಸರಿಗೆ ತಿಳಿಸಲಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ದೂರು ದಾಖಲಿಸಿಕೊಂಡಿದ್ದಾರೆ.
ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಧನಂಜಯ್ ತಿಳಿಸಿದ್ದು,ಯಾವುದೇ ಸೂಸೈಡ್ ನೋಟ್ ಕೂಡ ಬರೆದಿಟ್ಟಿಲ್ಲ ಎಂದು ಹೇಳಿದ್ದಾರೆ. ಮಾನಸಿಕ ಖಿನ್ನತೆ ಕಾರಣ ಇರಬೇಕೆಂದು ಗೆಳೆಯರು ಶಂಕಿಸಿದ್ದಾರೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಗಿದೆ. |