ದೇಶದಲ್ಲಿ ಬಿಜೆಪಿ ಮತ್ತು ಎಡಪಕ್ಷಗಳು ಹೊರತುಪಡಿಸಿ ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಕೇಂದ್ರದ ಮಾಜಿ ಸಚಿವ ರಾಜೀವ್ ಪ್ರತಾಪ್ ರೂಡಿ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ರಾಜ್ಯ ಬಿಜೆಪಿ ಆಯೋಜಿಸಿದ್ದ ಮಾಧ್ಯಮ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಷೇಧಿತ ಸಿಮಿ ಸಂಘಟನೆಯನ್ನು ಓಲೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜರಂಗದಳ ನಿಷೇಧಿಸುವ ಕುರಿತು ಮಾತುಗಳನ್ನಾಡುತ್ತಾರೆ ಎಂದು ಆರೋಪಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷವನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಒಟ್ಟುಗೂಡಿ, ಲಾಲ್‌ಕೃಷ್ಣ ಆಡ್ವಾಣಿಯವರನ್ನು ಪ್ರಧಾನಿಪಟ್ಟಗೇರುವ ಕನಸನ್ನು ನನಸು ಮಾಡಬೇಕೆಂದು ಹೇಳಿದರು.
ತಾಕತ್ತಿದ್ದರೆ ಬಜರಂಗದಳ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ತಾಕತ್ತಿದ್ದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸಲಿ ಎಂದು ಪ್ರತಾಪ್ ರೂಡಿ ಈ ಸಂದರ್ಭದಲ್ಲಿ ಸವಾಲು ಹಾಕಿದ್ದಾರೆ.
ಜನತೆಗೆ ಯಾವುದೂ ರಾಷ್ಟ್ರದ ದೇಶಭಕ್ತ ಸಂಘಟನೆ, ಯಾವುದೇ ದೇಶ ವಿರೋಧಿ ಸಂಘಟನೆ ಎನ್ನುವುದು ತಿಳಿದಿದೆ. ಹಾಗಾಗಿ ಬಜರಂಗದಳವನ್ನು ನಿಷೇಧಿಸಲು ಕೇಂದ್ರದ ಕೈಯಲ್ಲಿ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದುಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು.
ಕೇಂದ್ರ ಸರ್ಕಾರದ ವೈಫಲ್ಯ, ಹಣದುಬ್ಬರ, ಆರ್ಥಿಕ ಪರಿಸ್ಥಿತಿ ಮೊದಲಾದ ವಿಚಾರಗಳನ್ನು ಬಿಜೆಪಿ ಈ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ ಎಂದು ಅವರು ಹೇಳಿದರು. |