ಜೆಡಿಎಸ್ ಮತ್ತು ಕಾಂಗ್ರೆಸ್ ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಸಚಿವ ಆನಂದ್ ಆಸ್ನೋಟಿಕರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ಗುಡುಗಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸೇರ್ಪಡೆಗೊಂಡಿರುವ ಸಚಿವ ಆನಂದ್ ಆಸ್ನೋಟಿಕರ್ ಯಾವುದೇ ಅಪರಾಧವೆಸಗಿಲ್ಲ. ಈ ನಿಟ್ಟಿನಲ್ಲಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ವಿರೋಧ ಪಕ್ಷಗಳು ನೀಡಿರುವ ಆರೋಪಗಳು ನಿರಾಧಾರವಾಗಿದ್ದು, ಆನಂದ್ ಆಸ್ನೋಟಿಕರ್ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಅವರು ನುಡಿದರು.
ಬಿಜೆಪಿ ಸೇರಿದ ಮೇಲೆ ಆನಂದ್ ಅವರ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಈ ಹಿಂದೆ ಟಿಕೆಟ್ ನೀಡುವಾಗ ಈ ಕುರಿತು ತಿಳಿದಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಆನಂದ್ ಅವರು ಭಾಗಿಯಾಗಿದ್ದಾರೆಂಬುದು ಸಾಬೀತಾದರೆ ಪಕ್ಷ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. |