ತಮಟೆ ಗಣಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ಮಾಜಿ ಸಚಿವ ದಿವಾಕರ್ ಬಾಬು ಸೇರಿದಂತೆ 13 ಜನರನ್ನು ಈ ತಿಂಗಳ 28ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಸರಕಾರಿ ಸಿಬ್ಬಂದಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸೇರಿದಂತೆ 7 ಪ್ರಕರಣವನ್ನು ದಿವಾಕರ್ ಬಾಬು ಮೇಲೆ ಪೊಲೀಸರು ದಾಖಲಿಸಿದ್ದಾರೆ. ಈ ಸಂಬಂಧ ಬುಧವಾರ ರಾತ್ರಿ ದಿವಾಕರ್ ಬಾಬು ಸೇರಿದಂತೆ 13 ಜನರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರ ತಾರತಮ್ಯ, ಪಕ್ಷಪಾತ ನೀತಿ ವಿರೋಧಿಸಿ ಹಾಗೂ ತಮಟೆ ಗಣಿ ಪ್ರದೇಶದಲ್ಲಿ ಟಿಎನ್ ಆರ್ ಸಂಸ್ಥೆಗೆ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸಿದ್ದರು.
|