ಭಾಗ್ಯಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸುವಂತೆ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಗುವಿನ ಹೆಸರಿನಲ್ಲಿ ಠೇವಣಿ ಇಡಲಾಗಿತ್ತು. ಆದರೆ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಅಲ್ಲದೆ, ಈ ಯೋಜನೆಯನ್ನು ಎಲ್ ಐಸಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಆದರೂ ಇದರಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ದೂರುತ್ತಿವೆ. ಈ ಕಾರಣದಿಂದಾಗಿ ವಿಶೇಷ ತನೀಖೆ ನಡೆಸಿ ಜನತೆಗೆ ಸ್ಪಷ್ಟೀಕರಣ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ ಎಂದರು.
ಇದೇ ವೇಳೆ ಗೂಂಡಾ ಕಾಯ್ದೆ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಕೋರರನ್ನು ಗೂಂಡಾ ಕಾಯ್ದೆಯಡಿ ಶಿಕ್ಷಿಸುವ ಕುರಿತು ಗುರುವಾರದಂದು ನಡೆಯಲಿರುವ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. |