ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಹಾಕದ ಅಂಗಡಿಗಳ ಮಾಲೀಕರಿಗೆ 10ಸಾವಿರ ರೂಪಾಯಿ ದಂಡ ವಿಧಿಸಲಾಗುವುದು, ಇದಾದ ನಂತರವೂ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಪರವಾನಿಗೆಯನ್ನೇ ರದ್ದುಪಡಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ನೀಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ,ಈ ವಿಷಯ ತಿಳಿಸಿದ ಅವರು ಈ ಸಂಬಂಧ ಬಹಳ ಹಿಂದೆಯೇ ಕಾಯ್ದೆ ಮಾಡಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಬೇರೆ ಮಸೂದೆಯ ಜೊತೆ ಇದು ಸಹ ರಾಜ್ಯಪಾಲರಿಂದ ವಾಪಸ್ ಬಂದಿತ್ತು. ಇದಕ್ಕೆ ಸ್ಪಷ್ಟನೆಯನ್ನು ಕಳುಹಿಸುತ್ತೇವೆ. ನವೆಂಬರ್ ಒಂದರಿಂದ ಇದು ಜಾರಿಗೆ ಬರುವುದು ಖಚಿತ ಎಂದರು.
ರಾಜ್ಯೋತ್ಸವವನ್ನು ವರ್ಷಪೂರ್ತಿ ನುಡಿ ಹಬ್ಬವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಜನವರಿ ಒಂದರಿಂದ ಸಂಪೂರ್ಣ ಕನ್ನಡ ಅನುಷ್ಠಾನಕ್ಕೆ ಜಾಗೃತಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜಾಗೃತಿ ಜಾಥಾಗಳನ್ನು ಹಮ್ಮಿಕೊಂಡು ಕನ್ನಡ ಬಳಕೆ ಬಗ್ಗೆ ಅರಿವು ಮೂಡಿಸಲಾಗುವುದು.
ಬೆಂಗಳೂರು ನಗರದಲ್ಲೂ ಎಲ್ಲ ಶಾಸಕರು,ಸಂಸದರನ್ನು ಸೇರಿಸಿಕೊಂಡು ಜಾಗೃತಿ ಮೂಡಿಸಲು ಬೀದಿಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸುತ್ತೇವೆ. ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಕಾನೂನಿನ ಚೌಕ್ಕಟ್ಟಿನಲ್ಲಿ ಪಾಠ ಕಲಿಸುವುದರ ಜೊತೆಗೆ ಸಾರ್ವಜನಿಕವಾಗಿಯೂ ಘೇರಾವ್ ಹಾಕಲಾಗುವುದು ಎಂದರು. |