ಹಸಿರಸಿರಿ ಪ್ರಕೃತಿ ಮಡಿಲ ಕೊಡಗಿನಲ್ಲಿ ಶುಕ್ರವಾರ ತಲ ಕಾವೇರಿಯಲ್ಲಿನ ತೀರ್ಥೋದ್ಭವಕ್ಕಾಗಿ ಕ್ಷಣಗಣನೆ ಆರಂಭವಾಗಿದೆ.
ತುಲಾ ಸಂಕ್ರಮಣದ ದಿನವಾದ ನಾಳೆ ತಲ ಕಾವೇರಿಯಲ್ಲಿ ಮಧ್ನಾಹ್ನ 2.42ಕ್ಕೆ ತೀರ್ಥೋದ್ಭವವಾಗಲಿದ್ದು, ಅದಕ್ಕಾಗಿ ಭಾಗಮಂಡಲ, ತಲಕಾವೇರಿ ಸಜ್ಜುಗೊಂಡಿದೆ.
ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಗಳಿಗೆಯಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಧೋದ್ಭವವಾಗಲಿದೆ. ತುಲಾ ಮಾಸದಲ್ಲಿ ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ ಎಂಬುದು ನಂಬಿಕೆ.
ಕಾವೇರಿಯಲ್ಲಿನ ಈ ತೀರ್ಥೋದ್ಭವದ ಜಾತ್ರೆಗಾಗಿ ನೆರೆಯ ತಮಿಳುನಾಡು, ಕೇರಳ, ಆಂಧ್ರ ಸೇರಿದಂತೆ ವಿವಿಧೆಡೆಯಿಂದ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಪ್ರತಿವರ್ಷ ಕಾವೇರಿ ತೀರ್ಥೋದ್ಭವ ರಾತ್ರಿ ನಡೆಯುತ್ತಿದ್ದು, ಈ ಬಾರಿ ಮಧ್ನಾಹ್ನ ತೀರ್ಥೊದ್ಬವವಾಗುತ್ತಿರುವುದು ವಿಶೇಷವಾಗಿದೆ ಎಂದು ಇಲ್ಲಿನ ಅರ್ಚಕರಾದ ನಾರಾಯಣಾಚಾರಿ ತಿಳಿಸಿದ್ದಾರೆ.
ಈ ಮೊದಲು ತಲಕಾವೇರಿ ಜಾತ್ರೆಯಲ್ಲಿ 20 ರಿಂದ 25ಸಾವಿರ ಭಕ್ತರು ಸೇರುತ್ತಿದ್ದರು, ಆದರೆ ಇದೀಗ ದೇವಾಲಯದ ಪುನರ್ ನವೀಕರಣದ ನಂತರ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ ಎಂದ ಹೇಳಿದರು.
ನಾಳೆ ತೀರ್ಥೋದ್ಭವ ಸಂದರ್ಭದಲ್ಲಿ ನೂಕುನುಗ್ಗಲು ತಡೆಯುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |