ಗೋಕರ್ಣ ಮಹಾಬಲೇಶ್ವರ ದೇವಸ್ಥಾನ, ಅದಕ್ಕೆ ಸಂಬಂಧಿಸಿದ ಆಸ್ತಿಯನ್ನು ಶ್ರೀ ರಾಮಚಂದ್ರಾಪುರ ಮಠದ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡದಂತೆ ಧಾರವಾಡ ಸಂಚಾರಿ ಹೈಕೋರ್ಟ್ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ.
ಗೋಕರ್ಣ ದೇಗುಲವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಾಲಚಂದ್ರ ದೀಕ್ಷಿತರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ಅ.30ಕ್ಕೆ ಮುಂದೂಡಿದೆ.
ಇದೇ ವೇಳೆ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಹಾಬಲೇಶ್ವರ ದೇವಸ್ಥಾನದ ಭಕ್ತರಾದ ವಿನಾಯಕ ಹೆಗಡೆ, ನರಹರಿ ಹೆಗಡೆ ಸಲ್ಲಿಸಿದ್ದ ಇನ್ನೊಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸರ್ಕಾರ ಮತ್ತು ರಾಮಚಂದ್ರಾಪುರ ಮಠಕ್ಕೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರ ಮಧ್ಯಂತರ ಅರ್ಜಿ ಸಲ್ಲಿಸಿದ ವಕೀಲ ಜೆ.ಎಸ್. ಶೆಟ್ಟಿ, ವಿಚಾರಣೆ ಬಾಕಿ ಇರುವಾಗ ದೇಗುಲಕ್ಕೆ ಸಂಬಂಧಿಸಿದ ರೆವಿನ್ಯೂ ಖಾತೆಗಳನ್ನು ರಾಮಚಂದ್ರಾಪುರ ಮಠದ ಹೆಸರಿಗೆ ಬದಲಾಯಿಸಲಾಗುತ್ತಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದರು.
ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ರಾಮಚಂದ್ರಾಪುರ ಮಠಕ್ಕೆ ದೇಗುಲದ ಹಸ್ತಾಂತರ ನಿರ್ವಹಣೆಗೆ ಮಾತ್ರ ಸೀಮಿತ. ಹೀಗಾಗಿ ಖಾತೆ ಬದಲಾವಣೆ ಮಾಡದಂತೆ ತಡೆಯಾಜ್ಞೆ ನೀಡಿದೆ. |