ವಿಧಾನಸಭಾ ಉಪ ಚುನಾವಣೆಗಳ ಮಟ್ಟಿಗೆ ಮಾತ್ರ ಕಾಂಗ್ರೆಸ್ ಸೇರಿದಂತೆ ಜಾತ್ಯತೀತ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿನ ಹೊಂದಾಣಿಕೆಯನ್ನು ತಳ್ಳಿ ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧವಾಗಿ ರಾಷ್ಟ್ರಮಟ್ಟದಲ್ಲಿ ತೃತೀಯರಂಗ ಅಧಿಕಾರದ ಗದ್ದುಗೆ ಏರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಯುಪಿಎ ಸರ್ಕಾರದ ವಿರುದ್ಧ ಬೃಹತ್ ರಾಲಿಯನ್ನು ರಾಜ್ಯದಲ್ಲಿ ಸಂಘಟನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರ ನಿಧನದಿಂದಾಗಿ ಸ್ಥಗಿತವಾಯಿತು. ಸದ್ಯದಲ್ಲಿಯೇ ಮತ್ತೆ ರಾಲಿ ನಡೆಸಲಾಗುವುದು ಎಂದರು.
ಬಿಜೆಪಿಯ ಆಪರೇಷನ್ ಕಮಲದಲ್ಲಿ 20 ಜನ ಪ್ರತಿಪಕ್ಷ ಶಾಸಕರನ್ನು ಸೆಳೆಯಲು ಯೋಜನೆ ರೂಪಿಸಿತ್ತು. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಘಟನೆ ಇದಾಗಿದೆ. ಬಿಜೆಪಿಯ ಈ ದುರಾಲೋಚನೆಯನ್ನು ಕೊನೆಗಾಣಿಸಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂದರು.
ಬರೀ ವರ್ಗಾವಣೆಯಲ್ಲೇ ಕಾಲ ಕಳೆಯುತ್ತಿರುವ ಈ ಸರ್ಕಾರ ನಿಜಕ್ಕೂ ನಾಗರಿಕ ಸರ್ಕಾರವೇ ಎಂದು ತರಾಟೆಗೆ ತೆಗೆದುಕೊಂಡರು. ಈ ಸರ್ಕಾರ ನೋಡಿದರೆ ಅಸಹ್ಯವಾಗುತ್ತದೆ ಎಂದು ಟೀಕಿಸಿದರು. |