ಬೆಂಗಳೂರು:ನಾನೇನಾದರೂ ಪ್ರಧಾನಮಂತ್ರಿ ಸ್ಥಾನದಲ್ಲಿದ್ದರೆ ಕರ್ನಾಟಕ ಮತ್ತು ಒರಿಸ್ಸಾ ಸರ್ಕಾರಗಳನ್ನು ವಜಾಗೊಳಿಸಲು ಆದೇಶ ನೀಡುತ್ತಿದ್ದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ ಮತ್ತು ಒರಿಸ್ಸಾಗಳಲ್ಲಿ ಕೋಮುಗಲಭೆ ನಡೆಯುತ್ತಿದ್ದು, ಅಲ್ಪ ಸಂಖ್ಯಾತರು ಭಯದ ನೆರಳಲ್ಲಿ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂಥ ಕಠಿಣ ಪರಿಸ್ಥಿತಿಯಲ್ಲೂ ನಿರ್ಲಕ್ಷ್ಯ ಧೋರಣೆ ತಾಳಿರುವ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದಿನೆದಿನೇ ದಾಳಿಗಳು ಹೆಚ್ಚುತ್ತಿವೆ. ಇಂಥ ಮನಸ್ಥಿತಿ ಇರುವ ಸರ್ಕಾರಗಳಿಗೆ ಸಂವಿಧಾನದ ವಿಧಿ 356 ನೋಟಿಸ್ ಜಾರಿ ಮಾಡಿದರೆ ಸಾಲದು, ಸರ್ಕಾರವನ್ನೇ ವಜಾಗೊಳಿಸಿ ಸಾಮರಸ್ಯ ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗುಡುಗಿದರು.
ರಾಜ್ಯದಲ್ಲಿ ನಡೆದಿರುವ ಚರ್ಚ್ ದಾಳಿಯಲ್ಲಿ ಭಾಗಿಯಾಗಿರುವ ಬಜರಂಗದಳ ಮತ್ತು ಶ್ರೀರಾಮಸೇನೆ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಪುನರುಚ್ಚರಿಸಿದ್ದಾರೆ.
ಅಲ್ಲದೇ ಮಠಾಧೀಶರು ಅಡ್ಡಪಲ್ಲಕ್ಕಿಯಲ್ಲಿ ಓಡಾಡುವುದನ್ನು ಬಿಟ್ಟು ದಲಿತರ ಉದ್ದಾರಕ್ಕಾಗಿ ಹಣ ವಿನಿಯೋಗಿಸಲಿ ಇದರಿಂದ ಮತಾಂತರ ತಡೆಯಲು ಸಾಧ್ಯವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. |