ರಾಜ್ಯದಲ್ಲಿ ಭಯೋತ್ಪಾದನೆ ಹಾವಳಿಯಿಂದ ವಿಧಾನಸೌಧಕ್ಕೆ ಒದಗಿಸಲಾಗಿರುವ ಅಭೂತಪೂರ್ವ ಭದ್ರತೆ ಇದೀಗ ಸಾರ್ವಜನಿಕರು, ನೌಕರಿಗಷ್ಟೇ ಅಲ್ಲ, ಶಾಸಕರಿಗೂ ಇದರ ಬಿಸಿ ತಟ್ಟಿದ್ದಲ್ಲದೇ ಪೊಲೀಸ್ ಪೇದೆಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆಯೂ ನಡೆಯಿತು.
ಹುನಗುಂದ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಬನಹಟ್ಟಿ ಕ್ಷೇತ್ರದ ಶಾಸಕ ಸಿದ್ದು ಸವದಿ ತಮ್ಮ ಬೆಂಬಲಿಗರೊಂದಿಗೆ ವಿಧಾನಸೌಧ ಪ್ರವೇಶಿಸಲು ಪ್ರಯತ್ನಿಸಿದಾಗ ಪೊಲೀಸರು ತಡೆದಿದ್ದರು.
ಬಿಗಿ ಭದ್ರತೆಯಲ್ಲಿದ್ದ ಪೊಲೀಸರು ಪಾಸ್ ಇಲ್ಲ ಎಂಬ ಕಾರಣಕ್ಕಾಗಿ ಶಾಸಕರನ್ನು ಒಳಗೆ ಬಿಡಲು ನಿರಾಕರಿಸಿದರು. ಈ ಸಂದರ್ಭದಲ್ಲಿ ಕೋಪಗೊಂಡ ಶಾಸಕರು ಹಾಗೂ ಬೆಂಬಲಿಗರು ಹಾಗೂ ಪೊಲೀಸರ ನಡುವೆ ವಾಕ್ ಸಮರ ನಡೆಯಿತು.
ಏತನ್ಮಧ್ಯೆ ಒಂದು ಹಂತದಲ್ಲಿ ಮಾತಿನ ಘರ್ಷಣೆ ವಿಕೋಪಕ್ಕೆ ತಿರುಗಿದಾಗ ಶಾಸಕ ಸಿದ್ದು ಸವದಿ ಅವರು ಪೇದೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ಘಟನೆಯೂ ನಡೆಯಿತು.
ಇದರಿಂದ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಶಾಸಕರ ಜತೆ ಬಂದಿದ್ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕರನ್ನು ಅವಮಾನಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪೊಲೀಸರ ಸ್ಪಷ್ಟನೆ: ಬುಧವಾರದಂದು ನಡೆದ ಸಚಿವ ಸಂಪುಟದಲ್ಲಿ ವಿಧಾನಸೌಧಕ್ಕೆ ವಿನಾಕಾರಣ ಪಾಸ್ ಇಲ್ಲದೆ ಯಾರನ್ನೂ ಬಿಡದಂತೆ ಎಚ್ಚರ ವಹಿಸಬೇಕು ಎಂದು ಕಟ್ಟು ನಿಟ್ಟಾದ ಆದೇಶ ಹೊರಡಿಸಲಾಗಿತ್ತು. ಈ ನಿಟ್ಟಿನಲ್ಲಿ ಯಾರನ್ನು ಒಳಗೆ ಬಿಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |