ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪದಲ್ಲಿ ಮತ್ತಿಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿದಿದ್ದು, ಅಪಾರ ಪ್ರಮಾಣದಲ್ಲಿ ಸ್ಫೋಟಕ ತಯಾರಿಕಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿರುವುದಾಗಿ ಮಂಗಳೂರು ದಕ್ಷಿಣ ವಲಯ ಐಜಿಪಿ ಎ.ಎಂ.ಪ್ರಸಾದ್ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ದೇಶದಲ್ಲಿ ಭಯೋತ್ಪಾದನೆ ನಡೆಸಲು ಉಗ್ರರಿಗೆ ನೆರವು ನೀಡಿದ ಆರೋಪದಲ್ಲಿ ಬಂಟ್ವಾಳ ಬೋಳಂತೂರಿನ ರಫೀಕ್ ಹಾಗೂ ಉಡುಪಿ ಮುಳೂರು ನಿವಾಸಿ ಫಕೀರ್ ಬಾವಾ ಎಂಬಿಬ್ಬರನ್ನು ಕೊಪ್ಪದಲ್ಲಿ ಬಂಧಿಸಿರುವುದಾಗಿ ಹೇಳಿದರು.
ಇತ್ತೀಚೆಗಷ್ಟೇ ಮಂಗಳೂರಿನ ಮುಕ್ಕಚ್ಚೇರಿಯಲ್ಲಿ ಬಂಧಿಸಲ್ಪಟ್ಟ ನಾಲ್ಕು ಮಂದಿ ಶಂಕಿತ ಉಗ್ರರು ನೀಡಿದ್ದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.
ಬಂಧಿತರಿಂದ ಬಂದೂಕು, ಬಾಂಬ್ ತಯಾರಿಕೆಯ ಸಾಮಗ್ರಿಗಳನ್ನು ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಂಡಿರುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದರು.
ಶಂಕಿತ ಉಗ್ರರಾದ ಫಕೀರ್ ಮತ್ತು ರಫೀಕ್ ಕೊಪ್ಪ, ಎನ್.ಆರ್.ಪುರಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದರೆಂದು ಹೇಳಿದರು.
ಬಂಟ್ವಾಳದ ರಫೀಕ್ ಸ್ಫೋಟದ ರೂವಾರಿಯಾದ ಭಟ್ಕಳ ರಿಯಾಜ್‌ನ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿಸಿದ್ದು, ಬಂಧಿತರು ಇಂಡೋನೇಷ್ಯಾ ಉಗ್ರರೊಂದಿಗೆ ನಂಟು ಹೊಂದಿರುವ ಮಹತ್ವದ ಅಂಶವನ್ನು ಬಹಿರಂಗಪಡಿಸಿದ್ದಾರೆ.
ದೇಶದ ವಿವಿಧೆಡೆ ನಡೆದ ಸ್ಫೋಟದ ಪ್ರಕರಣದ ರೂವಾರಿಯಾಗಿರುವ ರಿಯಾಜ್ ಭಟ್ಕಳಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬಂಧಿತರಿಂದ ಮಹತ್ವದ ಮಾಹಿತಿಗಳು ಲಭಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಶಂಕಿತರನ್ನು ಬಂಧಿಸುವ ಸಾಧ್ಯತೆ ಇರುವುದಾಗಿ ತಿಳಿಸಿದರು. |