ಕರ್ನಾಟಕ-ತಮಿಳುನಾಡು ಗಡಿಭಾಗದ ಹೊಗೇನಕಲ್ ಯೋಜನೆಯ ವಿವಾದ ಮತ್ತೊಂದು ತಿರುವು ಪಡೆದಿದ್ದು, ಇದೀಗ ಎರಡು ರಾಜ್ಯಗಳ ಜಂಟಿ ಸಭೆ ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೊಗೇನಕಲ್ ವಿವಾದದ ಇತ್ತೀಚಿನ ಬೆಳವಣಿಗೆಗಳನ್ನು ಸಚಿವ ಪ್ರೊ.ಸೈಫುದ್ದೀನ್ ಸೋಜ್ ಅವರಿಗೆ ಮನವರಿಕೆ ಮಾಡಿಕೊಟ್ಟ ನಂತರ ಜಂಟಿ ಸಭೆಗೆ ಒಪ್ಪಿಕೊಂಡರು. ಈ ಬಗ್ಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂಲ ಯೋಜನೆ ಬಗ್ಗೆ ನಮಗೆ ತಕರಾರಿಲ್ಲ. ಕೇಂದ್ರ ಸರ್ಕಾರ 1997ರಲ್ಲಿ ಅನುಮತಿ ನೀಡಿದ್ದ ಹೊಗೇನಕಲ್ ಯೋಜನೆಗೂ, ಈಗ ತಮಿಳುನಾಡು ಅನುಷ್ಠಾನಗೊಳಿಸುತ್ತಿರುವ ಯೋಜನೆಗೂ ಹಲವಾರು ವ್ಯತ್ಯಾಸಗಳಿವೆ.
ಯೋಜನಾ ಪ್ರದೇಶ, ಬಳಸುವ ನೀರಿನ ಪ್ರಮಾಣ ಮತ್ತು ಮುಳುಗಡೆಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ವಿವರವನ್ನು ನೀಡಲು ತಮಿಳುನಾಡು ನಿರಾಕರಿಸುತ್ತ ಬಂದಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಹೊಗೇನಕಲ್ ಯೋಜನೆಯ ಪ್ರದೇಶ ತಮಿಳುನಾಡು ರಾಜ್ಯದಲ್ಲಿ ಎಂಬ ವಾದವನ್ನು ತಳ್ಳಿಹಾಕಿದ ಅವರು,ಹೊಗೇನಕಲ್ ಯೋಜನೆಯ ನಿವೇಶನ ಎರಡೂ ರಾಜ್ಯಗಳ ನಡುವಿನ 67ಕಿ.ಮೀ.ಗಳ ಸಾಮಾನ್ಯ ಗಡಿಪ್ರದೇಶದ ವ್ಯಾಪ್ತಿಯಲ್ಲಿದೆ ಎಂದರು.
ಜಲವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕೆಂಬುದು ನಮ್ಮ ನಿಲುವಾಗಿದೆ. ಆದರೆ ಹೊಗೇನಕಲ್ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಆಯ್ಕೆಯನ್ನು ನಾವಿನ್ನೂ ಕಾಯ್ದಿಟ್ಟುಕೊಂಡಿದ್ದೇವೆ ಎಂದು ಬೊಮ್ಮಾಯಿ ಹೇಳಿದರು. |