ಮತಾಂತರದ ಕುರಿತು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಲೇಖನ ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡುವ ಯತ್ನ ಮತ್ತು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರ ಹೆಸರಿಗೆ ಮಸಿ ಬಳಿಯುವ ಕುತಂತ್ರ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಕಿಡಿಕಾರಿದ್ದಾರೆ.
ಎಸ್.ಎಲ್.ಭೈರಪ್ಪ ಅವರು ದೈನಿಕವೊಂದರಲ್ಲಿ ಬರೆದಿರುವ ಲೇಖನವನ್ನು ಖಂಡಿಸಿ ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ರಾಜಕೀಯಕ್ಕೆ ಬಂದ ಮೇಲೆ ದೇಶದಲ್ಲಿ ಮತಾಂತರ ಕಾರ್ಯ ಹೆಚ್ಚಿದೆ ಎಂದು ಆರೋಪಿಸಿ ಭೈರಪ್ಪ ಬರೆದಿರುವ ಲೇಖನ ಖಂಡನಾರ್ಹ ಎಂದು ಖರ್ಗೆ ದೂರಿದರು.
ಸೋನಿಯಾಗಾಂಧಿ ಅವರು ತಮಗೆ ಒಲಿದು ಬಂದ ಪ್ರಧಾನಿ ಹುದ್ದೆ ತ್ಯಜಿಸಿ ಅವರು ತ್ಯಾಗ ಮಾಡಿದ್ದಾರೆ. ಆದರೆ ಹಿರಿಯ ಲೇಖಕರಾದ ಭೈರಪ್ಪ ಸಮಾಜ ಒಡೆಯುವ, ಕೋಮುಪ್ರಚೋದನಕಾರಿ ಲೇಖನ ಬರೆಯುತ್ತಿರುವುದು ಖಂಡನೀಯ ಎಂದು ಹೇಳಿದರು.
ಮತಾಂತರ ವಿಷಯವನ್ನು ಪ್ರಸ್ತಾಪಿಸುವ ಭೈರಪ್ಪ ಆಮಿಷವೊಡ್ಡಿ ಪಕ್ಷಾಂತರ ಮಾಡುವುದನ್ನು ಗಮನಿಸಲಿಲ್ಲವೇ, ಚರ್ಚ್‌ಗಳ ಮೇಲೆ ದಾಳಿ ನಡೆದು ಅಲ್ಪ ಸಂಖ್ಯಾತರ ಮೇಲೆ ಹಲ್ಲೆಯಾದರೂ ಸ್ಥಳಕ್ಕೆ ಭೇಟಿ ನೀಡದ ಭೈರಪ್ಪ ಪ್ರಚೋದನಕಾರಿ ಲೇಖನ ಬರೆಯುವುದು ಅವಹೇಳನಕಾರಿ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು. |