ಬಿಜೆಪಿಯ ಆಪರೇಷನ್ ಕಮಲ ಮತ್ತೆ ಮುಂದುವರಿದಿದೆ. ಗದಗ ಜಿಲ್ಲೆಯ ಪ್ರಭಾವಿ ಮುಖಂಡ, ಮಾಜಿ ಸಚಿವ ಎಸ್.ಎಸ್.ಪಾಟೀಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಪಾಟೀಲರನ್ನು ಪಕ್ಷಕ್ಕೆ ಸೇರಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಅನುಭವಿ ಪಾಟೀಲರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಲಿದೆ ಎಂದರು. ಕಾಂಗ್ರೆಸ್ ತೊರೆಯಲು ನಿರ್ದಿಷ್ಟ ಕಾರಣವೇನೂ ಇಲ್ಲ.
ಮುಖ್ಯಮಂತ್ರಿಯೊಂದಿಗಿನ ಆತ್ಮೀಯತೆಯಿಂದ ಬಿಜೆಪಿ ಸೇರಿದ್ದೇನೆ, ಉದಾಸಿ ಜೊತೆಗೇ ಬಿಜೆಪಿ ಸೇರಬೇಕಿತ್ತು. ಆದರೆ ವಿಧಾನಸಭೆ ಚುನಾವಣೆ ವೇಳೆ ಆಹ್ವಾನ ಬಂದಿದ್ದರೂ ತೀರ್ಮಾನ ಕೈಗೊಂಡಿರಲಿಲ್ಲ ಎಂದರು.
ಮೂಲತಃ ಜನತಾ ಪರಿವಾರದವರಾದ ಪಾಟೀಲರು ದೇವೇಗೌಡ ಹಾಗೂ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಚಿವರಾಗಿದ್ದರು. 2004ರಲ್ಲಿ ಕಾಂಗ್ರೆಸ್ ಸೇರಿ ಮುಂಡರಗಿ ಕ್ಷೇತ್ರದಿಂದ ಪುನರಾಯ್ಕೆಯಾದರು. ಕಳೆದ ಚುನಾವಣೆಯಲ್ಲಿ ಸೋತಿದ್ದರು.
ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಇದೇ 31 ರಂದು ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪಾಟೀಲರ ಬಿಜೆಪಿ ಸೇರ್ಪಡೆ ಫಲಿತಾಂಶದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. |