ಕಬ್ಬಿಗೆ ಹೆಚ್ಚುವರಿ ದರ ನಿಗದಿ ಮಾಡಲು ಸರ್ಕಾರ ವಿಳಂಬ ಮಾಡುತ್ತಿರುವುದರ ವಿರುದ್ಧ ಕಬ್ಬು ಬೆಳೆಗಾರರು ನವೆಂಬರ್‌ನಿಂದ ಉಗ್ರ ಹೋರಾಟ ನಡೆಸಲಿದ್ದಾರೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ.
ಮೂರು ತಿಂಗಳ ಹಿಂದೆ ಕಬ್ಬು ಅರೆಯುವ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಮುಖ್ಯಮಂತ್ರಿ ನೀಡಿದ್ದರೂ ಕೆಲವು ಕಾರ್ಖಾನೆಗಳು ಕಳೆದ ವರ್ಷದ ಬಾಕಿ ಹಣವನ್ನು ಟನ್‌ಗೆ 160 ರೂ.ಗಳಂತೆ ವಿತರಿಸಿಲ್ಲ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕರದ ನಿಗದಿ ಮಾಡಿರುವ ಕನಿಷ್ಠ ದರ ಕೂಡಾ ನೀಡಿಲ್ಲ. ಇಂತಹ ಕಾರ್ಖಾನೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ಕಳೆದ ವರ್ಷ 25 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಭೂಮಿಯಲ್ಲಿ ಕಬ್ಬು ಬೆಳೆಯಲಾಗಿತ್ತು. ಆದರೆ, ಈ ವರ್ಷ ಕೇವಲ 16-17 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಇದರಿಂದ ಸುಮಾರು 1 ಕೋಟಿ ಟನ್‌ನಷ್ಟು ಕಬ್ಬು ಕಡಿಮೆ. ಇದರಿಂದಾಗಿ ರೈತರು ಕೃಷಿಯಿಂದಲೇ ದೂರವಾಗುತ್ತಿದ್ದಾರೆ ಎಂದರು.
ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಬ್ಬು ಅಭಿವೃದ್ದಿ ಆಯುಕ್ತರ ಕಚೇರಿಯನ್ನು ಅಸ್ತಿತ್ವಕ್ಕೆ ತರಬೇಕು. ಬೆಳೆಗಾರರ ಹಾಗೂ ಕಾರ್ಖಾನೆಗಳ ಮಧ್ಯೆ ದ್ವಿಪಕ್ಷೀಯ ಒಪ್ಪಂದವಾಗಬೇಕು ಎಂದು ಅವರು ಒತ್ತಾಯಿಸಿದರು. |