ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಸಮರ್ಥವಾಗಿರುವುದರಿಂದ ಜನತಾದಳ (ಎಸ್) ಜತೆ ಮೈತ್ರಿಯ ಅಗತ್ಯವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಅಂತಹ ಸಂದರ್ಭ ಬಂದಾಗ ಮೈತ್ರಿ ಅನಗತ್ಯ ಎಂಬ ನನ್ನ ಅಭಿಪ್ರಾಯವನ್ನು ತಿಳಿಸುವೆ ಎಂದರು.
ಹೊಸ ಪಕ್ಷ ಕಟ್ಟುವ ಅಥವಾ ಬಿಜೆಪಿ ಸೇರುವ ಸುದ್ದಿಗಳೆಲ್ಲವೂ ಊಹಾಪೋಹವಷ್ಟೆ ಎಂದು ಹೇಳಿದ ಅವರು, ಕಾಂಗ್ರೆಸ್ ತ್ಯಜಿಸುವ ಪ್ರಶ್ನೆ ನನ್ನ ಮುಂದೆ ಇಲ್ಲ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುವುದಾಗಿ ಬಂದಿರುವ ಸುದ್ದಿ ಸಂಪೂರ್ಣ ಸುಳ್ಳು, ಕಾಂಗ್ರೆಸ್‌ನಲ್ಲಿ ಯಾರ ಬಗ್ಗೆಯೂ ನನಗೆ ಅಸಮಾಧಾನ ಇಲ್ಲ. ನಾನು ಎಲ್ಲೆಲ್ಲಿರುತ್ತೇನೋ ಅಲ್ಲೆಲ್ಲ ಯಾವಾಗಲೂ ಸಂತೋಷವಾಗಿಯೇ ಇರುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. |