ಬೆಂಗಳೂರಿನ ಮೂಲಭೂತ ಸೌಕರ್ಯದ ಕಾಮಗಾರಿ ಪ್ರಗತಿ ಪರಿಶೀಲನೆ ಹಾಗೂ ಕುಂದುಕೊರತೆ ವಿಚಾರಿಸಲು ಇನ್ನು ಮುಂದೆ ಪ್ರತಿ ಭಾನುವಾರ ನಗರ ಪ್ರದಕ್ಷಿಣೆ ಹಾಕುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಇನ್ನು ಮುಂದೆ ನಾನು ನಗರದಲ್ಲಿ ಇದ್ದಾಗಲೆಲ್ಲ ಪ್ರತಿ ಭಾನುವಾರ ಸಚಿವರಾದ ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಹಿತ ನಗರ ಪ್ರದಕ್ಷಿಣೆ ನಡೆಸುವೆ.
ಈ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿ ಪರಿಶೀಲನೆ ನಡೆಸಲಾಗುವುದು ಮತ್ತು ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಅವರು ತಿಳಿಸಿದರು.
ಇಡೀ ವಿಶ್ವದ ಗಮನ ನಗರದ ಮೇಲಿದೆ.ನಗರದಲ್ಲಿ ಬಂಡವಾಳ ತೊಡಗಿಸಲು ನಾನಾ ದೇಶಗಳ ಉದ್ಯಮಿಗಳು ಆಸಕ್ತಿ ಹೊಂದಿದ್ದಾರೆ. ಇದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯವನ್ನು ರೂಪಿಸಬೇಕಿದೆ.
ಇದಕ್ಕಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೆ ಗುಣಮಟ್ಟದ ಕಾಮಗಾರಿ ಮುಖ್ಯ.ಇಲ್ಲದಿದ್ದರೆ ದೆಹಲಿಯ ಮೆಟ್ರೋದಂತಹ ದುರಂತ ಸಂಭವಿಸಬಹುದು ಎಂದರು. ತೆರಿಗೆ ವಂಚನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು. |