ತಾಲೂಕು ಪಂಚಾಯ್ತಿ ರದ್ದು ಮಾಡುವ ಯೋಚನೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಪಂಚಾಯ್ತಿಗಳನ್ನು ರದ್ದುಪಡಿಸುವ ಬದಲು ಅವುಗಳಿಗೆ ಮತ್ತಷ್ಟು ಚೈತನ್ಯ ತುಂಬಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತಾಲೂಕು ಪಂಚಾಯ್ತಿ ರದ್ದುಪಡಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಘೋಷಿಸಿದರು.
ತಾಲೂಕು ಪಂಚಾಯ್ತಿಗಳು ನಿಷ್ಕ್ರಿಯವಾಗಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇವುಗಳನ್ನು ರದ್ದುಪಡಿಸು ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳು ಕೆಲಸ ಮಾಡುತ್ತಿವೆ. ತಾಲೂಕು ಪಂಚಾಯ್ತಿಗೆ ಹೆಚ್ಚಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳುವ ಅಧಿಕಾರ ವ್ಯಾಪ್ತಿಯನ್ನು ಸರ್ಕಾರ ವಿಸ್ತರಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಾಲೂಕು ಪಂಚಾಯ್ತಿ ರದ್ದುಪಡಿಸದೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ನಾಯಕರು ಹಾಗೂ ರಾಜಕೀಯ ಪಕ್ಷಗಳ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರ ಒತ್ತಾಯಕ್ಕೆ ಮುಖ್ಯಮಂತ್ರಿಗಳು ಮಣಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. |