ಉಡುಪಿ ಕನಕಗೋಪುರದ ಕುರಿತು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಯ ವಿವಾದ ಇನ್ನೂ ಹಸಿರಾಗಿರುವಾಗಲೇ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಪೇಜಾವರಶ್ರೀಗಳ ಶಾಪದಿಂದ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಬೀದಿಗೆ ಬಿದ್ದಿದ್ದಾರೆ ಎಂದು ಈಶ್ವರಪ್ಪನವರು ಹೇಳಿಕೆ ನೀಡಿರುವುದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವನಾಥ್, ಅಧಿಕಾರ ಆಸೆಯಿಂದ ಹಿಂದುಳಿದ ಜನಾಂಗಗಳ ಮಧ್ಯೆ ಒಡಕು ಉಂಟು ಮಾಡಲು ಈಶ್ವರಪ್ಪ ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕನಕಗೋಪುರ ಇರಲಿಲ್ಲ ಎನ್ನುತ್ತಿರುವ ಈಶ್ವರಪ್ಪ ಮುಂದೊಂದು ದಿನ ಕನಕ ಕಿಂಡಿಯೇ ಇಲ್ಲ ಎನ್ನಬಹುದು. ಈ ಮೂಲಕ ಶೋಷಿತ ಸಮುದಾಯವನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಪಕ್ಷೇತರರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿದೆ. ಪಕ್ಷೇತರರು ಬೆಂಬಲ ನೀಡದಿದ್ದರೆ ಬಿಜೆಪಿ ಕೂಡ ಬೀದಿಗೆ ಬೀಳುತ್ತದೆ ಎಂಬುದನ್ನು ಮರೆಯಬೇಡಿ ಎಂದು ಅವರು ಎಚ್ಚರಿಸಿದ್ದಾರೆ.
|