ಅರಣ್ಯಾಧಿಕಾರಿ ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ದಿವಾಕರ್ ಬಾಬು ಸೇರಿದಂತೆ 13 ಮಂದಿಗೆ ಬಳ್ಳಾರಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
ಸಂಡೂರು ತಾಲೂಕಿನ ತುಮಟಿ ಅರಣ್ಯ ಪ್ರದೇಶದಲ್ಲಿನ ಗಣಿ-ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ದಿವಾಕರ್ ಬಾಬು ಹಾಗೂ ಕೆಲವರು ಸೇರಿ ಇಲ್ಲಿನ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಅ. 15ರಂದು ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಉಂಟಾದ ಗಲಭೆಗೆ ಬಗ್ಗೆ ಅರಣ್ಯಾಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ದಿವಾಕರ್ ಬಾಬು ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ನಡೆಸಿದ ಜಿಲ್ಲಾ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ. ಇದಕ್ಕೂ ಮುನ್ನ ಕಲ್ಲುತೂರಾಟ ಪ್ರಕರಣಕ್ಕೆ ಹಾಜರಾಗಲು ನ್ಯಾಯಾಲಯಕ್ಕೆ ಆಗಮಿಸಿದ್ದ ದಿವಾಕರ್ ಬಾಬು, ಮಾಧ್ಯಮಗಳೆದುರು ಪೊಲೀಸ್ ವ್ಯವಸ್ಥೆಯನ್ನು ಖಂಡಿಸಿದರು. ದೊಡ್ಡ ಕ್ರಿಮಿನಲ್ ಗಳನ್ನು ನೋಡಿದಂತೆ, ತಮ್ಮೆಲ್ಲರನ್ನೂ ನೋಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಇದೇ ತೆರನಾದ ಪೊಲೀಸ್ ಕಾರ್ಯಚರಣೆ ನಡೆದರೆ, ತಮ್ಮೆಲ್ಲ ಬೆಂಬಲಿಗರ ಸಮೇತ ಜೈಲ್ ಭರೋ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಅವರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. |