ರಾಜ್ಯ ವಿಧಾನಸಭೆಯ ಎಂಟು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಕೈ ಜೋಡಿಸಿದರೆ ಪ್ರಚಾರ ಕಾರ್ಯದಿಂದ ದೂರ ಉಳಿಯುವುದಾಗಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚೌಹಾಣ್ ಇತ್ತೀಚೆಗಷ್ಟೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಹೇಳಿಕೆ ನೀಡಿರುವ ಬೆನ್ನಲ್ಲೆ ಹಲವು ನಾಯಕರೊಂದಿಗೆ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.ಕಾಂಗ್ರೆಸ್ ಜೊತೆ ಮೈತ್ರಿಗೆ ಜೆಡಿಎಸ್ ವರಿಷ್ಠರೇ ಕಡ್ಡಿಮುರಿಯುವಂತೆ ಹೇಳಿಕೆ ನೀಡಿದ್ದರೂ, ಕಾಂಗ್ರೆಸ್ ನಾಯಕರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಹೀಗಾಗಿ ಸಿದ್ದು ಬಣ ಪ್ರಚಾರದಿಂದ ದೂರ ಉಳಿದು ಅಹಿಂದಕ್ಕೆ ಮರು ಚಾಲನೆ ನೀಡುವ ಬೆದರಿಕೆಯನ್ನು ಹಾಕಿದೆ. ಈ ಕುರಿತು ಸಭೆಯ ಬಳಿಕ ಮಾತನಾಡಿದ ಬಿ.ಆರ್. ಪಾಟೀಲ್, ಹೊಂದಾಣಿಕೆ ಕುರಿತು ರಾಜ್ಯ ಮುಖಂಡರೊಂದಿಗೆ ಮಾತನಾಡಲು ತಾವು ಸಿದ್ಧರಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಿದ್ದರಾಮಯ್ಯ ಅವರನ್ನು ಕರೆದಲ್ಲಿ ಅಭಿಪ್ರಾಯ ತಿಳಿಸಲಾಗುವುದು ಎಂದು ಹೇಳಿದ್ದಾರೆ.ಸಭೆಯಲ್ಲಿ ಹಿರಿಯ ಮುಖಂಡರಾದ ಎಚ್. ಎಲ್. ಮಹದೇವಪ್ಪ, ಸಿ.ಎಂ. ಇಬ್ರಾಹಿಂ, ಸತೀಶ್ ಜಾರಕಿಹೊಳಿ, ಬಿ.ಆರ್. ಪಾಟೀಲ್ ಉಪಸ್ಥಿತರಿದ್ದು, ಸಿದ್ದು ಹೇಳಿಕೆಗೆ ಸಹಮತಿ ಸೂಚಿಸಿದ್ದಾರೆ ಎನ್ನಲಾಗಿದೆ. |
|