ನಿಗದಿತ ವಿದ್ಯುತ್ ಪ್ರಮಾಣಕ್ಕಿಂತ ಹೆಚ್ಚು ವಿದ್ಯುತ್ ಬಳಸುತ್ತಿರುವ ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಿಗೂ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ) ಭಾರೀ ಪ್ರಮಾಣದ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ರಾಜ್ಯಗಳು ಹೆಚ್ಚುವರಿಯಾಗಿ ವಿದ್ಯುತ್ ಪಡೆದರೆ ಮತ್ತು ವಿದ್ಯುತ್ ಫ್ರೀಕ್ವೆನ್ಸಿ 49.0ಹರ್ಟ್ಸ್‌ಗಿಂತ ಕಡಿಮೆಯಾದರೆ ಮೂರು ದಿನಗಳ ಒಳಗಾಗಿ ವರದಿ ನೀಡುವಂತೆ ಪ್ರಾದೇಶಿಕ ಲೋಡ್ ಡಿಸ್ಪ್ಯಾಚ್ ಸೆಂಟರ್‌ಗಳಿಗೆ (ಆರ್‌ಎಲ್‌ಡಿಸಿ) ಸಿಇಆರ್‌ಸಿ ಆದೇಶದಲ್ಲಿ ನಿರ್ದೇಶಿಸಿದೆ. ರಾಜ್ಯಗಳು ಆರ್‌ಎಲ್‌ಡಿಸಿಗಳ ಸೂಚನೆ ಪಾಲಿಸದಿದ್ದರೂ ಮೂರು ದಿನಗಳ ಒಳಗಾಗಿ ವರದಿ ನೀಡಬೇಕು ಎಂದಿದೆ.
ರಾಜ್ಯಗಳ ತಪ್ಪಿನಿಂದಾಗಿ ಗ್ರಿಡ್ ಕುಸಿತ ಉಂಟಾಗಬಾರದು ಎಂಬ ಕಾರಣದಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಿಇಆರ್‌ಸಿ ಅಭಿಪ್ರಾಯಪಟ್ಟಿದೆ.
ದಕ್ಷಿಣದ ಕರ್ನಾಟಕ, ಆಂಧ್ರ,ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಗೋವಾ ರಾಜ್ಯಗಳ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿ, ಬೇಡಿಕೆ ಹೆಚ್ಚುತ್ತಿರುವ ಕಾರಣ ಗ್ರಿಡ್‌ನಿಂದ ಹೆಚ್ಚಿನ ಪ್ರಮಾಣ ವಿದ್ಯುತ್ ಪಡೆಯುತ್ತಿದೆ.
ಆರ್‌ಎಲ್‌ಡಿಸಿಗಳ ನಿರ್ದೇಶನ ಪಾಲಿಸದ ರಾಜ್ಯಗಳ ಮೇಲೆ 15ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾದ ಅವಕಾಶಗಳು ವಿದ್ಯುಚ್ಛಕ್ತಿ ಕಾಯ್ದೆಯಲ್ಲಿದೆ. |