ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಆಗ್ರಹಿಸಿ ನವೆಂಬರ್ 5 ರಂದು ರಾಜ್‌ಘಾಟ್ ಬಳಿ ಧರಣಿ ನಡೆಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರವನ್ನು ಬೆಂಬಲಿಸುವ ಅಥವಾ ಸರ್ವಪಕ್ಷ ನಿಯೋಗದಲ್ಲಿ ದೆಹಲಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಬಣ್ಣ ಬೆರೆಸಿ ಲಾಭ ಪಡೆಯುವ ಉದ್ದೇಶ ಇದರ ಹಿಂದೆ ಇದೆ. ಮನವಿ ಸಲ್ಲಿಸುವುದಕ್ಕೂ ಮುನ್ನವೇ ಮುಖ್ಯಮಂತ್ರಿಯವರು ಧರಣಿ, ಸತ್ಯಾಗ್ರಹದ ಮಾತನಾಡಿರುವುದು ಅವರ ಉದ್ದೇಶವನ್ನು ಸ್ಪಷ್ಟಪಡಿಸಿದೆ.
ಕೇಂದ್ರ ಸಂಸ್ಕೃತಿ ಖಾತೆ ಸಚಿವೆ ಅಂಬಿಕಾ ಸೋನಿ ಈಗಾಗಲೇ ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಬೇಕೆಂದು ಶಿಫಾರಸು ಮಾಡಿದ್ದಾರೆ. ಇನ್ನೇನಿದ್ದರೂ ಗಜೆಟ್‌ನಲ್ಲಿ ದಾಖಲಾಗಿ ಕೇಂದ್ರ ಗೃಹ ಇಲಾಖೆಯ ಮೂಲಕ ಈ ನಿರ್ಧಾರ ಹೊರ ಬೀಳಬೇಕಿದೆ ಎಂದು ಖರ್ಗೆ ಹೇಳಿದ್ದಾರೆ.
ಮುಖ್ಯಮಂತ್ರಿಯವರು ತಮ್ಮ ಹೋರಾಟದಿಂದಲೇ ಶಾಸ್ತ್ರೀಯ ಭಾಷೆ ಸ್ಥಾನ ಸಿಕ್ಕಿತು ಎನ್ನುವ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಈ ರೀತಿಯ ಪ್ರಯತ್ನಗಳಿಗೆ ಮುಂದಾಗಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯುವುದಾದರೂ ಅದಕ್ಕೆ ಒಂದು ಕ್ರಮ ಇದೆ. ಪ್ರತಿಪಕ್ಷಗಳ ಮುಖಂಡರೊಂದಿಗೆ ಸಮಾಲೋಚಿಸಿ ನಿಯೋಗವನ್ನು ಒಯ್ಯಬೇಕು ಎಂದರು. |