ಜೆಡಿಎಸ್ ರಾಜ್ಯಾಧ್ಯಕ್ಷರ ಹುದ್ದೆಗೆ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಮೆರಾಜುದ್ದೀನ್ ಪಟೇಲ್ ಅವರ ನಿಧನ ನಂತರ ತೆರವಾದ ಸ್ಥಾನಕ್ಕೆ ಅಲ್ಪ ಸಂಖ್ಯಾತ ಅಥವಾ ವೀರಶೈವರನ್ನು ನೇಮಕ ಮಾಡಬೇಕೆಂದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ನಿರ್ಧರಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಅದರಿಂದಾಗಿ ಹೊರಟ್ಟಿ ಅವರ ಆಯ್ಕೆ ಬಹುತೇಕ ಖಚಿತವಾದಂತಾಗಿದೆ.ಅಧ್ಯಕ್ಷರ ಆಯ್ಕೆಗಾಗಿ ಪಕ್ಷದ ಮುಖಂಡರು ಅ.31ರಂದು ಸಭೆ ಸೇರುತ್ತಿದ್ದಾರೆ. ಮೆರಾಜುದ್ದೀನ್ ನಿಧನ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ನಾಲ್ಕೈದು ಹೆಸರುಗಳು ಪ್ರಸ್ತಾಪದಲ್ಲಿದ್ದು,ಇದೀಗ ದೇವೇಗೌಡರು ಅಂತಿಮವಾಗಿ ಹೊರಟ್ಟಿಯವರತ್ತ ತಮ್ಮ ನೋಟ ಬೀರಿದ್ದಾರೆ ಎಂದು ಹೇಳಲಾಗಿದೆ.ಮುಸ್ಲಿಮರಾದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಲಿಂಗಾಯಿತರಾದರೆ ಹೊರಟ್ಟಿ ಅವರನ್ನು ಆಯ್ಕೆ ಮಾಡಲು ಗೌಡರು ನಿರ್ಧರಿಸಿದ್ದಾರೆನ್ನಲಾಗಿದೆ. ಹೊರಟ್ಟಿ ಕಾಂಗ್ರೆಸ್‌ನತ್ತ ಜಿಗಿಯಲು ಸಿದ್ಧತೆ ಮಾಡಿಕೊಂಡಿರುವ ಮುನ್ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ ಗೌಡರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. |
|