ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಕುರಿತು ದೆಹಲಿಗೆ ತೆರಳಲಿರುವ ಸರ್ವಪಕ್ಷ ನಿಯೋಗದಿಂದ ಹಿಂದೆ ಸರಿದ ಬೆನ್ನಲ್ಲೇ ಜೆಡಿಎಸ್ ಕೂಡ ಭಾಗವಹಿಸದಿರಲು ತೀರ್ಮಾನಿಸಿದೆ.
ಈ ಕುರಿತು ಮಾತನಾಡಿದ ಜೆಡಿಎಸ್ ಪಕ್ಷದ ವಕ್ತಾರ ವೈ.ಎಸ್.ವಿ.ದತ್ತ, ಸರ್ಕಾರದ ವಿಫಲತೆಗಳ ಬಗ್ಗೆ ಜನರಲ್ಲಿ ಬೇಸರ ಉಂಟಾಗಿರುವ ಕಾರಣ ಭಾವನಾತ್ಮಕ ವಿಚಾರಗಳ ಮೂಲಕ ಜನರ ದಿಕ್ಕನ್ನು ಬೇರೆಡೆ ತಿರುಗಿಸುವ ಇಂತಹ ರಾಜಕೀಯದ ತೀರ್ಮಾನಗಳಿಗೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದಾರೆ.
ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ 371 ವಿಧಿಗೆ ತಿದ್ದುಪಡಿ ತರುವ ಒತ್ತಾಯ ಎನ್ ಡಿಎ ಸರ್ಕಾರ ಇದ್ದಾಗ ಮಾಡಿದಾಗ ಗೃಹ ಸಚಿವರಾದ ಎಲ್.ಕೆ. ಅಡ್ವಾಣಿ ಅವರೇ ತಿರಸ್ಕರಿಸಿದ್ದರು. ಆಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಿಸಲು ಇವರಿಂದ ಸಾಧ್ಯವಾಗಲಿಲ್ಲ. ಈಗ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದರು.
ವಿರೋಧ ಪಕ್ಷಗಳನ್ನು ದಮನ ಮಾಡುವ ಪ್ರಕೃತಿಯನ್ನು ಅಧಿಕಾರಕ್ಕೆ ಬಂದಾಗಿನಿಂದಲೂ ಯಡಿಯೂರಪ್ಪ ಅನುಸರಿಸುತ್ತಿದ್ದಾರೆ. ಇಂತಹವರಿಗೆ ಹೇಗೆ ಬೆಂಬಲ ನೀಡಬೇಕು ಎಂದು ಅವರು ಲೇವಡಿ ಮಾಡಿದರು. |