ನಗರದಲ್ಲಿ ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಸಿಡಿದು ಕಣ್ಣಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ನೂರಕ್ಕೇರಿದೆ.
ನಗರದ ನಾರಾಯಣ ನೇತ್ರಾಲಯ, ಮೋದಿ ಆಸ್ಪತ್ರೆ, ಮಿಂಟೋ, ನೇತ್ರಧಾಮ,ಶೇಖರ್ ನೇತ್ರಾಲಯ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಬಹುತೇಕ ಮಂದಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದು, ಕೆಲವು ಮಂದಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಕಳೆದೆರಡು ದಿನಗಳಿಂದೀಚೆಗೆ ಮಿಂಟೋ ಕಣ್ಣಾಸ್ಪತ್ರೆಗೆ 25ಮಂದಿ ಗಾಯಗೊಂಡವರು ಚಿಕಿತ್ಸೆಗಾಗಿ ಆಗಮಿಸಿದ್ದು, ಇವರಲ್ಲಿ 4 ಮಂದಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಚಿಕಿತ್ಸೆಗಾಗಿ ದಾಖಲಿಸಿದ್ದು, ಉಳಿದವರನ್ನು ಹೊರ ರೋಗಿಗಳಾಗಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಚಂದ್ರಪ್ರಭಾ ತಿಳಿಸಿದ್ದಾರೆ.
ಡಾ.ಎಂ.ಸಿ.ಮೋದಿ ಆಸ್ಪತ್ರೆಯಲ್ಲಿ 6ಮಂದಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ದರೆ, ಶೇಖರ್ ನೇತ್ರಾಲಯದಲ್ಲಿ 20ಮಂದಿ ಚಿಕಿತ್ಸೆ ಪಡೆದಿದ್ದಾರೆಂದು ಡಾ.ಜ್ಯೋತಿ ದೀಪಕ್ ತಿಳಿಸಿದ್ದಾರೆ.
ನೇತ್ರಧಾಮ ಹೈ ಹಾಸ್ಪಿಟಲ್‌ನಲ್ಲಿ 14 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಡಾ.ವಾದಿರಾಜ್ ಹೇಳಿದ್ದಾರೆ. |