ನಿಷೇಧಿತ ಸಿಮಿ ಕಾರ್ಯಕರ್ತರ ಚಟುವಟಿಕೆ ಹೆಚ್ಚಿರುವ ಬೆಳಗಾವಿಯಲ್ಲಿ ಉಗ್ರರ ಶೋಧ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿರುವುದಾಗಿ ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವ ಪೊಲೀಸರು ಈವರೆಗೆ ಬೆಳಗಾವಿಯಲ್ಲಿ 11ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಬೆಳಗಾವಿಯಲ್ಲಿ ಇನ್ನು ಹಲವು ಮಂದಿ ಉಗ್ರರು ಅಡಗಿರುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಶೋಧಕಾರ್ಯ ಮುಂದುವರಿದಿದೆ.
ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಇರಿಸಿಕೊಂಡಿದ್ದರೆನ್ನಲಾದ ಆಟೋ ಚಾಲಕ ನಾಸಿರ್ ಅಬ್ದುಲ್ ಮಜೀದ್ ಹಾಗೂ ಲಾರಿ ಚಾಲಕ ನವೀದ್ ಮೀರ್ ಸಾಬ್ ಖಾಜಿ ಎಂಬವರನ್ನು ಮಂಗಳವಾರ ಸೆರೆ ಹಿಡಿಯಲಾಗಿತ್ತು.
ಈ ಹಿಂದೆ ಬಂಧಿತರಾಗಿದ್ದ ಉಗ್ರರೊಂದಿಗೆ ನವೀದ್ ಸಿಲಿಂಡರ್ ಬಾಂಬ್ ತಯಾರಿಕೆಯಲ್ಲಿ ಭಾಗಿಯಾಗಿದ್ದಾನೆಂದು, ಚುನಾವಣೆ ವೇಳೆ ಟಿಳಕವಾಡಿ ಪ್ರದೇಶದಲ್ಲಿ ಮತಗಟ್ಟೆ ಸ್ಫೋಟಿಸುವ ಸಂಚಿನಲ್ಲೂ ಭಾಗಿಯಾಗಿದ್ದನೆಂದು ಆಪಾದಿಸಲಾಗಿದೆ. |