ಧಾರವಾಡ-ಪುಣೆ ಹೆದ್ದಾರಿ ಪಕ್ಕದ ವೆಂಕಟಾಪುರ ಸಮೀಪದ ಸೇತುವೆಯಲ್ಲಿ ಸೆಪ್ಟೆಂಬರ್ 26ರಂದು ದೊರೆತಿರುವ ಜೀವಂತ ಬಾಂಬ್‌ಗಳಿಗೂ ಇತ್ತೀಚೆಗೆ ಬೆಳಗಾವಿಯಲ್ಲಿ ಬಂಧಿಸಲಾಗಿರುವ ಇಬ್ಬರು ಶಂಕಿತ ಉಗ್ರರಿಗೂ ಸಂಬಂಧಗಳಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ವೆಂಕಟಾಪುರದಲ್ಲಿ ಸಿಕ್ಕಿರುವ ಬಾಂಬ್‌ಗಳ ಜೊತೆಗೆ ಅಡುಗೆ ಅನಿಲದ 3 ಸಿಲಿಂಡರುಗಳು ದೊರೆತಿರುವುದೇ ಈ ಸಂದೇಹಕ್ಕೆ ಬಲವಾದ ಕಾರಣವಾಗಿದೆ. ಬೆಳಗಾವಿಯಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರ ನವೀದ್ ಮೀರ್ ಸಾಬ್ ಖಾಜಿ ಸಿಲಿಂಡರ್ ಬಾಂಬ್ ತಜ್ಞ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ವೆಂಕಟಾಪುರ ಪ್ರಕರಣದ ಹಿಂದೆ ಈತನ ಕೈವಾಡವಿರಬಹುದೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬೆಳಗಾವಿ ಪೊಲೀಸರಿಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಧಾರವಾಡ ಪ್ರಕರಣದ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಭದ್ರತೆಯ ದೃಷ್ಟಿಯಿಂದ ಬೆಳಗಾವಿಯ ಪೊಲೀಸರಿಗೆ ಸೆರೆ ಸಿಕ್ಕ ಶಂಕಿತ ಉಗ್ರರ ವಿಚಾರಣೆಯನ್ನು ಮುಂದೂಡಲಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ, ವಿಧಾನಪರಿಷತ್ ಉಪಚುನಾವಣೆಗಳು ಸಮೀಪಿಸುತ್ತಿರುವುದರಿಂದ ಭದ್ರತೆ ಒದಗಿಸುವುದು ಅಸಾಧ್ಯವೆಂಬ ಕಾರಣದಿಂದ ವಿಚಾರಣೆಯನ್ನು ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ ಬೆಳಗಾವಿಯಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರರನ್ನು ನವೆಂಬರ್ 2ರ ನಂತರ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಸೋನಿಯಾ ನಾರಂಗ್ ತಿಳಿಸಿದ್ದಾರೆ. |