ಸಚಿವ ಸ್ಥಾನದಿಂದ ಪದಚ್ಯುತಿಗೊಂಡಿದ್ದ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಎಸ್.ಕೆ.ಬೆಳ್ಳುಬ್ಬಿ ಅವರು ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಬಗ್ಗೆ ಯಾವುದೇ ಮುನ್ಸೂಚನೆ ನೀಡದ ಬೆಳ್ಳುಬ್ಬಿ ಅವರು ಶುಕ್ರವಾರ ಸದ್ದಿಲ್ಲದೆ ಅಧ್ಯಕ್ಷ ಹುದ್ದೆಯ ಅಧಿಕಾರ ವಹಿಸಿಕೊಂಡಿದ್ದರು. ಯಾವುದಾದರೊಂದು ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಒತ್ತಡ ಹೇರಿದ್ದರಿಂದ ಬೆಳ್ಳುಬ್ಬಿ ಅವರು ಮಣಿಯಬೇಕಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಮ್ಮನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಬೇಸರಗೊಂಡಿದ್ದ ಬೆಳ್ಳುಬ್ಬಿ ಅವರಿಗೆ ಈ ಹಿಂದೆಯೇ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು. ಆದರೆ ಬೆಳ್ಳುಬ್ಬಿ ಅದನ್ನು ನಿರಾಕರಿಸಿದ್ದರು.
|