ಕನ್ನಡ ರಾಜ್ಯೋತ್ಸವದಂದು ಎಲ್ಲಾ ಐಟಿ-ಬಿಟಿ ಕಂಪೆನಿಗಳು ಸೇರಿದಂತೆ ಎಲ್ಲಾ ಕಚೇರಿಗಳಿಗೂ ರಜೆ ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಕಾರ್ಮಿಕ ಸಚಿವ ಬಚ್ಚೇಗೌಡ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ಒಂದರಂದು ಎಲ್ಲಾ ಖಾಸಗಿ ಕಂಪೆನಿಗಳಿಗೂ ರಜಾದಿನ ಅನ್ವಯಿಸುತ್ತದೆ. ಅಲ್ಲದೆ, ಈ ದಿನದ ರಜೆಗೆ ವೇತನವನ್ನು ಕಡಿತಗೊಳಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಇದೇ ವೇಳೆ ಕನ್ನಡ ನಾಮಫಲಕ ಕಡ್ಡಾಯದ ಕುರಿತು ಮಾತನಾಡಿದ ಅವರು, ಕನ್ನಡ ನಾಮಫಲಕ ಪ್ರದರ್ಶಿಸದ ಮಳಿಗೆ ಹಾಗೂ ಸಂಸ್ಥೆಗಳ ಪರವಾನಗಿ ರದ್ದು ಪಡಿಸಲಾಗುವುದು. ಅಷ್ಟೇ ಅಲ್ಲದೆ, 250 ರಿಂದ 10 ಸಾವಿರ ದಂಡ ವಿಧಿಸಲಾಗುವುದು ಹಾಗೂ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಕನ್ನಡದಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಅಕ್ಟೋಬರ್ ಒಂದರಂದೇ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಆಡಳಿತ ಭಾಷೆ ಕನ್ನಡ ಕಡ್ಡಾಯವಾಗಿದ್ದು, ಇದುವರೆಗೆ ಪರಿಣಾಮಕಾರಿ ಅನುಷ್ಠಾನವಾಗಿರಲಿಲ್ಲ ಎಂದು ವಿಷಾದಿಸಿದ ಅವರು, ಅನುಷ್ಠಾನದ ಹೊಣೆಯನ್ನು ಜಿಲ್ಲಾಧಿಕಾರಿ, ಪುರಸಭೆ ಆಯುಕ್ತ, ಆಯಾಯ ಸಂಸ್ಥೆಗಳ ಮುಖ್ಯಸ್ಥರಿಗೆ ಹೊರಿಸಲಾಗುವುದು ಎಂದು ತಿಳಿಸಿದ್ದಾರೆ. |