ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತಳಾಗಿರುವ ಸಾಧ್ವಿ ಪ್ರಾಗ್ಯಾ ಸಿಂಗ್ ಅನ್ನು ಶುಕ್ರವಾರ ಬೆಂಗಳೂರಿಗೆ ಕರೆ ತರಲಾಗಿದ್ದು, ಮಂಪರು ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಾಗ್ಯಾ ಸಿಂಗ್ ಅನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳ ಅಧಿಕಾರಿಗಳು ಇಂದು ಬೆಳಿಗ್ಗೆ ಬೆಂಗಳೂರಿಗೆ ಕರೆ ತಂದಿರುವುದಾಗಿ ಹೇಳಿವೆ.
ಎರಡು ವರ್ಷದ ಹಿಂದಷ್ಟೇ ಸನ್ಯಾಸತ್ವ ಸ್ವೀಕರಿಸಿದ್ದ ಸಾಧ್ವಿ ಅವರನ್ನು ಸೆ.29ರಂದು ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಸಾಧ್ವಿಗೆ ಮಂಪರು ಪರೀಕ್ಷೆಗೆ ಒಳಪಡಿಸುವ ಕುರಿತಂತೆ ಮಹಾರಾಷ್ಟ್ರದ ಎಟಿಎಸ್ ಅಧಿಕಾರಿಗಳು ಅ.27ರಂದು ನಾಸಿಕ್ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು.
ಮಧ್ಯಪ್ರದೇಶದ ಕಾಲೇಜ್‌ವೊಂದರಲ್ಲಿ ಎಂ.ಎ.ಪದವಿ ಪಡೆದಿರುವ ಪ್ರಾಗ್ಯಾ ಸಿಂಗ್, ವಿದ್ಯಾರ್ಥಿ ಜೀವನದ ದಿನಗಳಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪ್ರಮುಖ ಕಾರ್ಯಕರ್ತೆಯಾಗಿದ್ದಳು.
ಈಕೆ ಇತ್ತೀಚೆಗೆ ನಿವೃತ್ತ ಸೇನಾಧಿಕಾರಿಯೊಬ್ಬರ ಬಳಿ ಬಾಂಬ್ ತಯಾರಿಕಾ ತರಬೇತಿ ಪಡೆದಿದ್ದರು ಎಂದೂ ನಾಸಿಕ್ ನ್ಯಾಯಾಲಯದಲ್ಲಿ ಆರೋಪಿಸಲಾಗಿದೆ. |