ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ದೆಹಲಿಗೆ ತೆರಳಲಿರುವ ಸರ್ವಪಕ್ಷಗಳ ನಿಯೋಗದ ಜತೆ ತಾವು ತೆರಳುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಈ ರೀತಿಯ ಬಹಿಷ್ಕಾರ ಪ್ರಜಾಪ್ರಭುತ್ವಕ್ಕೆ ಅವಮಾನ ಎಸಗಿದಂತೆ ಎಂದು ಹೇಳಿದ್ದಾರೆ.
ಅವರು ಶುಕ್ರವಾರ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಾಗಬೇಕು. ಅದನ್ನು ಬಿಟ್ಟು ರಾಜಕೀಯ ಮಾಡುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಶೋಭೆ ತರುವಂತಹದ್ದಲ್ಲ ಎಂದು ಕಿವಿಮಾತು ಹೇಳಿದರು.
ಸಮಯ, ಸಂದರ್ಭ ನೋಡಿಕೊಂಡು ಪ್ರತಿಪಕ್ಷಗಳು ರಾಜಕೀಯ ಮಾಡಬೇಕು, ರಾಜ್ಯದ ಹಿತ ಬಂದಾಗ ನಮ್ಮಲ್ಲಿರುವ ವೈಷಮ್ಯವನ್ನು ಮರೆತು ಎಲ್ಲರೂ ಒಗ್ಗೂಡಬೇಕು ಎಂದು ಸಲಹೆ ನೀಡಿದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಬೇಕು ಎನ್ನುವುದು ಸಮಸ್ತ ಕನ್ನಡಿಗರ ಕನಸು, ಅದು ನನಸಾಗಬೇಕಾದರೆ, ಜನಪ್ರತಿ ನಿಧಿಗಳು ಎಲ್ಲರೂ ಒಗ್ಗಟ್ಟಾಗಬೇಕು.
ಆದ್ದರಿಂದ ದೆಹಲಿಗೆ ತೆರಳುವ ಸರ್ವಪಕ್ಷಗಳ ನಿಯೋಗವನ್ನು ಬಹಿಷ್ಕಾರ ಮಾಡುವುದು ಸರಿಯಲ್ಲ, ಬಹಿಷ್ಕಾರ ಮಾಡಿದಲ್ಲಿ ಅದು ಕನ್ನಡಿಗರಿಗೆ, ಕನ್ನಡ ನೆಲಕ್ಕೆ ಮಾಡುವ ದ್ರೋಹವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. |