ಶಿರಾಡಿ ಘಾಟ್ ರಸ್ತೆ ದುರಸ್ತಿ ಕುರಿತು ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿರುವುದರಿಂದ ಮಂಗಳೂರು-ಬೆಂಗಳೂರು ನಡುವಿನ ರಸ್ತೆ ದುರಸ್ತಿ ಕಾಮಗಾರಿ ವಹಿಸಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ರಾಷ್ಟ್ರೀಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಗುಂಡ್ಯದಿಂದ ಉಪ್ಪಿನಂಗಡಿವರೆಗಿನ 14 ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ವಹಿಸಿಕೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದರು. ಯೋಜನೆ ಈಗಾಗಲೇ ಮಂಜೂರಾಗಿದ್ದು, ಏಜೆನ್ಸಿ ಕೂಡಾ ನಿಗದಿಯಾಗಿದೆ. ಆದರೆ ಹಿಂದಿನ ಗುತ್ತಿಗೆ ಕುರಿತು ಹೈಕೋರ್ಟ್ ಆದೇಶದ ಭಯದಿಂದ ಗುತ್ತಿಗೆದಾರರು ವಹಿಸಿಕೊಳ್ಳಲು ಒಪ್ಪುತ್ತಿಲ್ಲ ಎಂದರು. ದುರವಸ್ಥೆಗೊಂಡಿರುವ ಶಿರಾಡಿ ಘಾಟ್ ದುರಸ್ಥಿಗೆ ರಾಜ್ಯ ಸರ್ಕಾರ ಅಂದಾಜು 4 ಕೋಟಿ ರೂ. ವೆಚ್ಚ ಮಾಡಬೇಕು. ಸರ್ಕಾರ ಈ ರಸ್ತೆಗಳ ನಿರ್ವಹಣೆಯಲ್ಲಿ ವಿಫಲವಾಗಿದೆ. ನೆಲಮಂಗಲದಿಂದ ಹಾಸನದವರೆಗಿನ ಚತುಷ್ಪಥ ಕಾಮಗಾರಿ ಬೇಲೂರುವರೆಗೆ ಪೂರ್ಣಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 48ರ ಹಾಸನದಿಂದ ಬಿ.ಸಿ.ರೋಡ್‌ತನಕದ ಚತುಷ್ಪಥ ಕಾಮಗಾರಿಯ ಸಾಧ್ಯತೆಗಳ ಬಗೆಗಿನ ವರದಿಯನ್ನು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಅದು ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಶಿರಾಡಿ ಘಾಟ್ ಸೇರಿದಂತೆ ಈ ಭಾಗದ ಜನತೆಯ ಸಮಸ್ಯೆ ತಪ್ಪುತ್ತದೆ ಎಂದರು.
ಬಿಜೆಪಿ ಸರ್ಕಾರ ಮಾತ್ರ ಅಭಿವೃದ್ದಿ ಬಗ್ಗೆ ಗಮನ ಹರಿಸದೇ ಕೇವಲ ಇತರ ಪಕ್ಷದ ಸದಸ್ಯರ 'ಬೇಟೆ'ಯಲ್ಲಿ ತೊಡಗಿದೆ ಎಂದು ಮೊಯ್ಲಿ ದೂರಿದರು.
|