ಸಾರಿಗೆ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಶೀಘ್ರವೇ ಸಮಗ್ರ ಸಾರಿಗೆ ನೀತಿಯನ್ನು ಜಾರಿಗೆ ತರುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ನೂತನ ಸಾರಿಗೆ ನೀತಿಯನ್ನು ಜಾರಿಗೊಳಿಸುತ್ತಿದ್ದು, ಅದನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ, ಬಸ್ ಚಾಲಕರಿಗೆ ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿ, ಎಲ್ಲಾ ಬಸ್‌ಗಳಿಗೆ ಜಿಪಿಎಸ್ ಅಳವಡಿಕೆ ಅಲ್ಲದೇ ಅಪಘಾತಕ್ಕೆ ಕಾರಣರಾದ ಬಸ್ ಚಾಲಕರಿಗೆ ಒಂದು ವರ್ಷದವರೆಗೆ ನಿಷೇಧ ಹೇರಲಾಗುವುದು ಎಂದು ತಿಳಿಸಿದರು.
ಇಂತಹ ನೂತನ ಯೋಜನೆಯೊಂದಿಗೆ ಸಾರಿಗೆ ಇಲಾಖೆಗೆ ಸಮಗ್ರ ನೀತಿಯೊಂದನ್ನು ಜಾರಿಗೆ ತರಲು ಯೋಜಿಸಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಇಂತಹ ಸಮಗ್ರ ನೀತಿ ಜಾರಿಯಾದರೆ, ಇದು ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ನೂತನ ಸಾರಿಗೆ ನೀತಿಯನ್ನು ಜಾರಿಗೊಳಿಸಿದ ಕೀರ್ತಿ ಕರ್ನಾಟಕದ್ದಾಗಲಿದೆ ಎಂದರು. |