ಕನ್ನಡಿಗರ ಸಹನೆ, ಸೌಜನ್ಯ ಹಾಗೂ ಸತತ ಪ್ರಯತ್ನ ಕೇಂದ್ರ ಸರ್ಕಾರದ ದೃಢ ನಿಶ್ಚಯ ಮತ್ತು ಭಾಷೆಗಿರುವ ಮಾನ್ಯತೆಯಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಗಿದೆಯೇ ಹೊರತು, ಯಡಿಯೂರಪ್ಪ ನಿಯೋಗ ಕೊಂಡೊಯ್ಯುತ್ತಾರೆಂಬ ಬೆದರಿಕೆಯಿಂದಲ್ಲ ಎಂದು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರು, ಕನ್ನಡ ಪರ ಹೋರಾಟಗಾರರ ನಿರಂತರ ಪ್ರಯತ್ನದಿಂದ ಕನ್ನಡ ಮತ್ತು ತೆಲುಗು ಭಾಷೆಗೆ ಶ್ರೇಷ್ಟ ಸ್ಥಾನ ಲಭಿಸಿದೆ ಎಂದರು.
ಈ ಬಗ್ಗೆ ಯಡಿಯೂರಪ್ಪನವರು ತಮ್ಮ ಬೆದರಿಕೆಯಿಂದ ಪ್ರಾಪ್ತವಾಯಿತು ಎಂದುಕೊಳ್ಳುವುದು ಬೇಡ. ಇದರಿಂದ ಕನ್ನಡಿಗರ ಸನ್ನಡತೆಗೆ ಮಾಡಿದ ಅವಮಾನವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಘೋಷಣೆ ಮಾಡಿರುವ ಕನ್ನಡಪರ ಕೆಲಸಗಳು ಸರ್ಕಾರಿ ಆದೇಶಗಳ ಮಟ್ಟದಲ್ಲೇ ನೆನೆಗುದಿಗೆ ಬಿದ್ದಿವೆ. ಕನ್ನಡ ಪ್ರಮುಖ ಕವಿಗಳ ಹೆಸರಿನಲ್ಲಿ ಸ್ಮಾರಕ ಘೋಷಣೆ, ಅನುದಾನ ಘೋಷಣೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೂರು ಕೋಟಿ ರೂ.ಗಳ ಹಣವನ್ನು ಬಿಡುಗಡೆ ಮಾಡಿರುವುದಷ್ಟೇ ಸರ್ಕಾರದ ಸಾಧನೆ ಎಂದು ಟೀಕಿಸಿದ್ದಾರೆ. |