ರವಿಪ್ರಕಾಶ್ ರೈ (ನ್ಯೂಸ್ ರೂಮ್)ದೇಶದ ಎರಡನೇ ಅತಿ ದೊಡ್ಡ ಪುಸ್ತಕೋತ್ಸವ ಎಂದೇ ಜನಪ್ರಿಯತೆ ಪಡೆದಿರುವ ಬೆಂಗಳೂರು ಪುಸ್ತಕೋತ್ಸವ-2008 ನವೆಂಬರ್ 14 ರಿಂದ 23ರ ವರೆಗೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಪುಸ್ತಕ ಮಹಾಮೇಳ ಲಕ್ಷ, ಲಕ್ಷ ಸಂಖ್ಯೆಯಲ್ಲಿ ಪುಸ್ತಕ ಪ್ರಿಯರನ್ನು ಆಕರ್ಷಿಸಲಿದೆ. ದೇಶದ ದೊಡ್ಡ ಪುಸ್ತಕ ಮಾರಾಟ ಮೇಳ ನಡೆಯುವುದು ಪ್ರತಿ ವರ್ಷ ಕೋಲ್ಕೊತಾದಲ್ಲಿ. ಅದು ಬಿಟ್ಟರೆ ಬೆಂಗಳೂರಿನಲ್ಲೇ ಎಂಬುದು ಗಮನಾರ್ಹ.ಈ ಬಾರಿ ಪುಸ್ತಕೋತ್ಸವ ಯಶಸ್ವಿ 6ನೇ ವರ್ಷಕ್ಕೆ ಕಾಲಿಡುತ್ತಿದೆ. ಹತ್ತು ದಿನಗಳ ಕಾಲ ನಡೆಯುವ ಈ ಪುಸ್ತಕ ಮೇಳದಲ್ಲಿ ಒಂದು ಅಂದಾಜು 20 ಕೋಟಿ ರೂಪಾಯಿಗಳ ದಾಖಲೆಯ ಪುಸ್ತಕ ಮಾರಾಟ ವಹಿವಾಟು ನಡೆಯುತ್ತದೆ. ಒಂದು ಮಿಲಿಯನ್‌ಗೂ ಹೆಚ್ಚು ಪುಸ್ತಕಗಳು ಒಂದೇ ಸೂರಿನಡಿ ಲಭ್ಯವಿರುವುದು ಈ ಪುಸ್ತಕೋತ್ಸವದ ವಿಶೇಷತೆ. ಈ ಬಾರಿ 280ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿದ್ದು ಅವುಗಳಲ್ಲಿ ಸುಮಾರು 61 ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕ ಲಭ್ಯವಾಗಲಿದೆ. ಕನ್ನಡ ಪುಸ್ತಕಗಳಲ್ಲದೆ, ಆಂಗ್ಲ, ಹಿಂದಿ, ತಮಿಳು, ತೆಲುಗು ಹೀಗೆ ವಿವಿಧ ಭಾರತೀಯ ಭಾಷೆಯ ಪುಸ್ತಕಗಳು, ವಿಶೇಷವಾಗಿ ಮಕ್ಕಳ ಪುಸ್ತಕಗಳು ಒಂದೆಡೆ ಲಭ್ಯವಿರುವುದರಿಂದ ಲಕ್ಷಾಂತರ ಪುಸ್ತಕ ಪ್ರೇಮಿಗಳಿಗೆ ಇದು ವರದಾನವಾಗಲಿದೆ. ಈ ಬಾರಿ ಕನ್ನಡ ಪ್ರಕಾಶಕರಿಗೆ ಮಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗಿದೆ.ಬೆಳಗ್ಗೆ 11 ರಿಂದ ರಾತ್ರಿ 8ರವರೆಗೆ ಪುಸ್ತಕ ಪ್ರಿಯರು ಇದಕ್ಕೆ ಭೇಟಿ ಕೊಡಬಹುದು. ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸುವ ದೃಷ್ಟಿಯಿಂದ ಅವರಿಗೆ ಉಚಿತ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಇತರರು 20 ರೂ. ಗಳ ಅಲ್ಪ ಶುಲ್ಕವನ್ನು ಪಾವತಿಸಿ ಪುಸ್ತಕೋತ್ಸವದಲ್ಲಿ ಭಾಗಿಯಾಗಬಹುದು. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಖ್ಯಾತ ಪ್ರಕಾಶಕರು ಪುಸ್ತಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಪುಸ್ತಕೋತ್ಸವದಲ್ಲಿ ಎಲ್ಲ ಭಾಷೆಯ ಪಂಡಿತರು ಭಾಗವಹಿಸುವುದು ಮತ್ತೊಂದು ವಿಶೇಷ. ಪುಸ್ತಕ ಪ್ರೇಮಿಗಳ ಮನ ತಣಿಸಲು ನಾನಾ ಬಗೆಯ ಪುಸ್ತಕಗಳ ಜೊತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯಾಸರಾಯ ಬಲ್ಲಾಳ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ವಿವಿಧ ಭಾಷಾ ಕವಿ ಲೇಖಕರೊಡನೆ ಪ್ರತಿದಿನವೂ ಅಪರೂಪದ ಸಂವಾದ ಈ ಬಾರಿ ಪುಸ್ತಕೋತ್ಸವದಲ್ಲಿ ಆಯೋಜಿಸಲಾಗಿದೆ. ಕನ್ನಡ ಸಾಹಿತಿಗಳಷ್ಟೇ ಅಲ್ಲದೇ ಹಿರಿಯ ಬಂಗಾಲಿ ಲೇಖಕರು, ಮಣಿಪುರದ ಕವಯತ್ರಿ, ಮಲೆಯಾಳಂ ಭಾಷೆಯ ಸಾಹಿತಿ, ಮರಾಠಿಯ ಜನಪ್ರಿಯ ಕಾದಂಬರಿಗಾರರು, ತಮಿಳು ಭಾಷೆಯ ಪ್ರಾಜ್ಞರು ಅನುದಿನವು ಬೆಂಗಳೂರು ಪುಸ್ತಕೋತ್ಸವದಲ್ಲಿ ಭಾಗವಹಿಸುತ್ತಿರುವುದು ಈ ಬಾರಿಯ ವಿಶೇಷ.ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸುತ್ತಿರುವ ಭಾಷಾ ಭಾರತಿ ಹೆಸರಿನ ಈ ವಿವಿಧ ಲೇಖಕರ ಸಮ್ಮಿಲನದ ಅಪರೂಪದ ಗೋಷ್ಠಿ ಪುಸ್ತಕೋತ್ಸವದುದ್ದಕ್ಕೂ ನಡೆಯಲಿದೆ.ಬಂಗಾಲಿಯ ಲೇಖಕರಾದ ದಿಲೀಪ್ ದಾಸ್, ಹೇಮಾದ್ರಿ ದೇಖ್, ಮಣಿಪುರದ ಕವಯತ್ರಿ ಶ್ರೀಮತಿ ಎನ್. ಭಾನುಮತಿ ದೇವಿ, ಕೇರಳದ ಪ್ರಸಿದ್ಧ ಸಾಹಿತಿ ರಾಮನ್ ಉನ್ನಿ, ಕೆ.ಜಿ. ಶಂಕರ ಪಿಳ್ಳೈ, ತೇರಳಿ ಶೇಖರ್, ಮರಾಠಿಯ ಕಾದಂಬರಿಗಾರ ಲಕ್ಷ್ಮಣ ಗಾಯಕವಾಡ್, ಕನ್ನಡ ಸಾಹಿತಿಗಳಾದ ಡಾ. ಸುಮತೀಂದ್ರ ನಾಡಿಗ, ಅಗ್ರಹಾರ ಕೃಷ್ಣಮೂರ್ತಿ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಶ್ರೀಮತಿ ತಾರಿಣಿ ಶುಭದಾಯಿನಿ, ಎಂ.ಆರ್. ಭಗವತಿ, ಡಾ. ಶ್ರೀನಿವಾಸ ಹಾವನೂರು. ಸ. ರಘನಾಥ ಸೇರಿದಂತೆ ಅನೇಕ ಕವಿಗಳು ಭಾಗವಹಿಸಲಿದ್ದಾರೆ.10 ದಿನಗಳ ಕಾಲ ನಡೆಯುವ ಈ ಮಹಾ ಪುಸ್ತಕ ಮೇಳವನ್ನು ಗೃಹ ಸಚಿವರಾದ ಡಾ.ವಿ.ಎಸ್. ಆಚಾರ್ಯ ಉದ್ಘಾಟಿಸಲಿದ್ದಾರೆ. ಕಸಾಪ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕನ್ನಡದ ಬೇಡಿಕೆಯ ನಟಿ ಪೂಜಾಗಾಂಧಿ ಈ ಬಾರಿಯ ಪುಸ್ತಕೋತ್ಸವದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ನಾನು ಪ್ರಸ್ತಕ ಓದ್ತೀನಿ, ಮತ್ತೆ ನೀವು? ಇದು ನಟಿ ಪೂಜಾಗಾಂಧಿಯವರ ಸ್ಲೋಗನ್. ಬನ್ನಿ ನಲಿಯಿರಿ, ಕಲಿಯಿರಿ ಇದು ಈ ಬಾರಿಯ ಪುಸ್ತಕೋತ್ಸವದ ಘೋಷ ವಾಕ್ಯ. ಪುಸ್ತಕೋತ್ಸವವನ್ನು ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕ್ಲಬ್ ಕ್ಲಾಸ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. |