ಚುನಾವಣೆಯ ಸಂದರ್ಭದಲ್ಲಿ ಅಸಮರ್ಪಕವಾಗಿ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ನಗರ ಸಿವಿಲ್ ನ್ಯಾಯಾಲಯ ಸಚಿವ ಆನಂದ್ ಆಸ್ನೋಟಿಕರ್ ವಿರುದ್ಧ ಶುಕ್ರವಾರ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.ಸಚಿವ ಆನಂದ್ ಆಸ್ನೋಟಿಕರ್ ಅವರನ್ನು ನ.28ರೊಳಗೆ ಹಾಜರು ಪಡಿಸುವಂತೆ ಇಲ್ಲಿಯ ಸಿ.ಜೆ.ಎಮ್. ನ್ಯಾಯಾಲಯ ಉ.ಕ. ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಆದೇಶಿಸಿದೆ.ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆನಂದ್ ಆಸ್ನೋಟಿಕರ್ ಅವರು ಚುನಾವಣಾ ಆಯೋಗ ತಪ್ಪು ಆಸ್ತಿ ವಿವರನ್ನು ನೀಡಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮೂಲಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು.ಈಗಾಗಲೇ ಆಸ್ತಿ ವಿವರ ಪ್ರಕರಣ ರಾಜಕೀಯ ವಲಯದಲ್ಲಿ ಸಾಕಷ್ಟು ವಿವಾದ ಗ್ರಾಸವಾಗಿದ್ದು, ಸ್ವತಃ ಸಚಿವ ಆನಂದ್ ಆಸ್ನೋಟಿಕರ್ ಅವರೇ ಆಸ್ತಿ ವಿವರನ್ನು ಮುಚ್ಚಿಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದರು.ಪ್ರಕರಣವನ್ನು ಕೈಗೆತ್ತಿಕೊಂಡು ಕಕ್ಷಿದಾರರ ಪರ ವಕೀಲ ಎಂ. ಬಿ. ನರಗುಂದ ಅವರು ಸಿಆರ್ ಪಿಸಿ ಸೆಕ್ಷನ್ 205 ಪ್ರಕಾರ ಸಚಿವ ಆನಂದ್ ಆಸ್ನೋಟಿಕರ್ ಅವರ ಪರ ವಾದಿಸಲು ಹಾಗೂ ಜಾಮೀನು ನೀಡುವ ಕೋರಿಕೆಯ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯವು ಹಾಜರು ಪಡಿಸುವಂತೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. |