ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರ ಉರುಳಿಸಿದ ಪಾಪಪ್ರಜ್ಞೆ ನನ್ನನ್ನು ಈಗಲೂ ಕಾಡುತ್ತಿದೆ ಎಂಬುದಾಗಿ ಬಹಿರಂಗವಾಗಿ ಹೇಳಿದ ಸಚಿವ ಬಚ್ಚೇಗೌಡರು,ಅದಕ್ಕಾಗಿ ಕ್ಷಮೆಯಾಚಿಸುವುದಾಗಿಯೂ ಹೇಳಿದರು.ಹುಬ್ಬಳ್ಳಿಯ ಗಾಜಿನಮನೆ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮತ್ತು ಕೌಶಲ್ಯ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಚ್ಚೇಗೌಡರು, ಈ ಹೀನ ಕಾರ್ಯಕ್ಕೆ ತನ್ನನ್ನು ದಾಳವನ್ನಾಗಿ ಬಳಸಿಕೊಂಡಿರುವುದಾಗಿ ತಿಳಿಸಿದರು.ಆಗ ನಾನು ಮೊದಲ ಬಾರಿಗೆ ಶಾಸಕನಾಗಿದ್ದೆ, ನಮ್ಮ ಹಿರಿಯರೊಬ್ಬರು(ದೇವೇಗೌಡ?) ಮನೆಗೆ ಆಗಮಿಸಿ ನನ್ನ ಹೆಂಡತಿಯ ತಲೆಯ ಮೇಲೆ ಕೈಯಿಟ್ಟು ಆಣೆ ಮಾಡಿ ಹೇಳಿದರು. ಯಾವುದೋ ಒಂದು ಕಾಗದಕ್ಕೆ ಸಹಿ ಪಡೆದು ಹೋದರು. ಮರುದಿನ ಬೊಮ್ಮಾಯಿ ಅವರ ಸರ್ಕಾರ ಉರುಳಿತು. ನಿಜಕ್ಕೂ ನನಗೆ ಅದೊಂದು ಕೆಟ್ಟ ಗಳಿಗೆ ಎಂದು ವಿಷಾದಿಸಿದರು.ಅಂದಿನಿಂದ ನನ್ನ ಮನಸ್ಸಿನಲ್ಲಿ ಪಾಪಪ್ರಜ್ಞೆ ಕಾಡುತ್ತಲೇ ಇದೆ, ಆ ಕಾರಣಕ್ಕಾಗಿಯೇ ನಾನು ತುಂಬಿದ ಸಭೆಯಲ್ಲಿ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರ ಕ್ಷಮೆ ಯಾಚಿಸುವುದಾಗಿ ಹೇಳುವ ಮೂಲಕ ಸಭೆಯಲ್ಲಿದ್ದವರನ್ನು ಅಚ್ಚರಿಯಲ್ಲಿ ಮುಳುಗಿಸಿದರು.ಇತ್ತೀಚೆಗಷ್ಟೇ ಬಚ್ಚೇಗೌಡರು, ಮಾಜಿ ಪ್ರಧಾನಿ ದೇವೇಗೌಡರನ್ನು ಆಧುನಿಕ ಭಸ್ಮಾಸುರ ಎಂದು ಬಣ್ಣಿಸುವ ಮೂಲಕ ವಿವಾದಕ್ಕೆ ಈಡಾಗಿದ್ದರು. ಅದಕ್ಕೆ ಜೆಡಿಎಸ್‌ನ ಮಾಜಿ ಸಚಿವ ಚಲುವರಾಯಸ್ವಾಮಿ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಈ ಇಳಿ ವಯಸ್ಸಿನಲ್ಲಿ ಬಚ್ಚೇಗೌಡರಂತಹ ಹಿರಿಯರು ಹೀಗೆಲ್ಲ ಮಾತನಾಡತ್ತಾರೆ ಎಂಬುದಾಗಿ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದರು. |