ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಅಭಾವ ಉಂಟಾಗಿರುವುದು ಸರ್ಕಾರದ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಆರೋಪಿಸಿದ್ದಾರೆ.
ನಗರದಲ್ಲಿ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್, ಜನವರಿಯ ಚಳಿಗಾಲದ ಸಂದರ್ಭದಲ್ಲಿ ವಿದ್ಯುತ್ ಅಭಾವ ಎದುರಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಇದು ಕೃತಕ ಅಭಾವ ಅಲ್ಲದಿದ್ದರೂ ನಿರ್ವಹಣೆಯಲ್ಲಿನ ವೈಫಲ್ಯವೇ ಕಾರಣ ಎಂದು ದೂರಿದ್ದಾರೆ.
ಆದರೆ ವಿದ್ಯುತ್ ಕೊರತೆ ಕುರಿತು ಹಿಂದಿನ ಸರ್ಕಾರಗಳ ಕಡೆಗೆ ಕೈತೋರಿಸುವುದು ಸರಿಯಲ್ಲ. ಇಂದಿನ ಸರ್ಕಾರಗಳ ನ್ಯೂನತೆಗಳಿದ್ದರೆ ಅದನ್ನು ಸರಿಪಡಿಸುವುದು ಇವರ ಆದ್ಯತೆಯಾಗಿರಬೇಕು ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಭರವಸೆಗಳ ಮಹಾಪೂರದ ಸರ್ಕಾರವಾಗಿದೆ. ರಾಜ್ಯದ ಹಣಕಾಸಿನ ಸ್ಥಿತಿಗತಿ ಬಗ್ಗೆ ಸಂಪೂರ್ಣ ಚಿತ್ರಣವನ್ನು ಜನರ ಮುಂದಿಡಬೇಕು. ಬಜೆಟ್ ಆದ್ಯತೆ ಆಧಾರದ ಮೇಲೆ ಇವರು ಭರವಸೆಗಳನ್ನು ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು. |