ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಚಿವ ಸಿ. ಚನ್ನಿಗಪ್ಪ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದು, ಸಚಿವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜೆಡಿಎಸ್ ಸಮಾವೇಶ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಚನ್ನಿಗಪ್ಪ ಬರುತ್ತಿರುವಾಗ ಮೇಖ್ರಿ ಸರ್ಕಲ್ ಬಳಿ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.ಚನ್ನಿಗಪ್ಪ ವಾಹನವನ್ನು ಅಡ್ಡಗಟ್ಟಿದ ಸುಮಾರು 20 ಮಂದಿ ಕಾರ್ಯಕರ್ತರು, ಚನ್ನಿಗಪ್ಪ ಅವರನ್ನು ಹಿಡಿದು ಎಳೆದಾಡಿ ತಲೆ, ಎದೆ ಹಾಗೂ ಭುಜಗಳಿಗೆ ಪೆಟ್ಟಾಗುವಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಿಗಪ್ಪ, ಜೆಡಿಎಸ್ ಇದೀಗ ರೌಡಿಗಳ ಪಕ್ಷವಾಗಿ ಪರಿವರ್ತನೆಯಾಗುತ್ತಿದೆ. ಬೇರೆಯವರ ಮೇಲೆ ಭಯ ಹುಟ್ಟಿಸುವ ಮೂಲಕ ಪಕ್ಷ ಕಟ್ಟಬಹುದು ಎಂಬ ಭಾವನೆ ಮೂಡಿದೆ. ಇದು ಬಿಟ್ಟು ಶಾಂತಿಯುತವಾಗಿ ಪಕ್ಷ ಕಟ್ಟುವಂತಹ ಬುದ್ದಿ ಬೆಳೆಸಿಕೊಳ್ಳಲಿ ಎಂದು ಹರಿಹಾಯ್ದರು. |