ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಆನಂದ್ ಆಸ್ನೋಟಿಕರ್ ನಗರದ ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾರಿಗೊಳಿಸಿದ್ದ ಜಾಮೀನು ರಹಿತ ವಾರಂಟ್ ವಾಪಾಸು ಪಡೆದ ಸಿಜೆಎಂ ನ್ಯಾಯಾಲಯ, 50 ಸಾವಿರ ರೂಪಾಯಿ ದಂಡ ವಿಧಿಸಿ , ವಿಚಾರಣೆಯನ್ನು ನ.28ಕ್ಕೆ ಮುಂದೂಡಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ನಾಮಪತ್ರದ ಜತೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದ ಆರೋಪದಡಿ ನವೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು.
ಆದರೆ ಸಚಿವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ ನಂ.28ರೊಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿದ್ದರು.
ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಹಾಜರಾದ ಆಸ್ನೋಟಿಕರ್ ಸಮನ್ಸ್‌ನಲ್ಲಿ ನಿಗದಿಪಡಿಸಿದ ದಿನ ವಿಚಾರಣೆಗೆ ಗೈರು ಹಾಜರಾದ ಬಗ್ಗೆ ನ್ಯಾಯಾಲಯದ ಕ್ಷಮೆ ಕೋರಿದರು.
ಬಳಿಕ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಟಿ ಚನಾಳ ಅವರು 50 ಸಾವಿರ ರೂ. ದಂಡ ವಿಧಿಸಿ ಜಾಮೀನು ನೀಡಿದೆ. ಅಲ್ಲದೆ, ಸಚಿವರಿಗೆ ವಿದೇಶಕ್ಕೆ ಹೋಗುವ ಪ್ರಸಂಗವಿದ್ದರೆ ಪೂರ್ವಾನುಮತಿ ಪಡೆಯಬೇಕು ಎಂಬ ಶರತ್ತನ್ನು ನ್ಯಾಯಾಲಯ ವಿಧಿಸಿದೆ. |