ಮಾಲೆಗಾಂವ್ ಬಾಂಬ್ ಸ್ಫೋಟದ ತನಿಖೆಯಿಂದ ಬೆಳಕಿಗೆ ಬಂದಿರುವ ವಿಚಾರಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಕರ್ಮಕಾಂಡ ಬಯಲಾಗಿದೆ ಎಂದು ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಟೀಕಿಸಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾಕದರಿಗೆ ಜಾತಿ, ಧರ್ಮ ಇಲ್ಲ. ಇದರಿಂದ ಎಲ್ಲಾ ಧರ್ಮದವರೂ ಸಾವು ನೋವು ಅನುಭವಿಸುತ್ತಾರೆ. ಭಯೋತ್ಪಾದನೆಯನ್ನು ಎಲ್ಲರೂ ಖಂಡಿಸಬೇಕು. ಇದು ಮುಸ್ಲಿಂ ಭಯೋತ್ಪಾದನೆ, ಇದು ಹಿಂದೂ ಭಯೋತ್ಪಾದನೆ ಅಥವಾ ಇದು ಕ್ರೈಸ್ತ ಭಯೋತ್ಪಾದನೆ ಎಂದು ಬೊಟ್ಟು ಮಾಡಿ ಹೇಳುವುದು ಘೋರ ಅಪರಾಧ ಎಂದರು.
ಮುಸ್ಲಿಂ ಸಮಾಜದ ಧಾರ್ಮಿಕ ಮುಖಂಡರು ಈಗಾಗಲೇ ವಿವಿಧೆಡೆ ಸಭೆ ನಡೆಸಿ ಇಸ್ಲಾಂನಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ ಮತ್ತು ಮುಸ್ಲಿಮರು ಯಾರಾದರೂ ಭಯೋತ್ಪಾದನೆಯಲ್ಲಿ ತೊಡಗಿದರೆ ಆತ ಮುಸ್ಲಿಮನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಲೆಗಾಂವ್ ಸ್ಫೋಟದಲ್ಲಿ ಬಳಸಿರುವ ಮೋಟಾರ್ ಬೈಕ್ ಸಾಧ್ವಿ ಪ್ರಗ್ಯಾ ಸಿಂಗ್‌ಗೆ ಸೇರಿದ್ದು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ ಬೆನ್ನಲ್ಲೇ, ಶ್ರೀಕಾಂತ್ ಪುರೋಹಿತ್, ದಯಾನಂದ ಪಾಂಡೆ ಹೆಸರುಗಳು ಕೇಳಿ ಬರುತ್ತಿವೆ. ಇಂತಹ ಸನ್ನಿವೇಶದಲ್ಲಿ ಪ್ರಕರಣದ ತನಿಖೆಗೆ ಬಿಜೆಪಿ ಹಿಂದೂ ಕವಚವನ್ನು ಹಾಕಿ ತಡೆ ಒಡ್ಡುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ. |