ನೋಕಿಯಾ ಸಂಸ್ಥೆಯ ಉದ್ಯೋಗಿ ಸೋನಿ ಜಗದೀಶ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಅದೇ ಸಂಸ್ಥೆಯ ಉದ್ಯೋಗಿಗಳಾಗಿರುವ ತೇಜಾ ಗುಡೇನಾ ಮತ್ತು ಸುಚಿನ್ ಕೃಷ್ಣಮೂರ್ತಿ ಅವರಿಗೆ ಹೈಕೋರ್ಟ್ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ನೀಡಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮುಂದೆ ಇನ್ನು 10ದಿನಗಳ ಒಳಗೆ ಹಾಜರಾಗುವಂತೆ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಆದೇಶಿಸಿದ್ದಾರೆ.
50ಸಾವಿರ ರೂ.ಮೊತ್ತದ ಬಾಂಡ್ ನೀಡುವಂತೆ ಹಾಗೂ ಪ್ರತಿ ಭಾನುವಾರ ಪ್ರಕರಣ ದಾಖಲಾಗಿರುವ ನಗರದ ತಿಲಕನಗರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕುವಂತೆ ಷರತ್ತು ವಿಧಿಸಲಾಗಿತ್ತು.
ಕೋರ್ಟ್ ನೀಡಿರುವ ನಾಲ್ಕು ವಾರಗಳ ಅವಧಿ ಮುಗಿದ ನಂತರ ಸಂಬಂಧಿಸಿದ ನ್ಯಾಯಾಲಯದ ಮುಂದೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ನೋಕಿಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋನಿಗೆ ಈ ಇಬ್ಬರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದ್ದುದರಿಂದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಸೆಷೆನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಆದರೆ ಜಾಮೀನು ನೀಡಲು ಅ.18ರಂದು ಸೆಷೆನ್ಸ್ ನ್ಯಾಯಾಲಯ ನಿರಾಕರಿಸಿತ್ತು, ಇದನ್ನು ವಜಾಗೊಳಿಸುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ. |